ADVERTISEMENT

ಚಂದ್ರಬಾಬು ನಾಯ್ಡು ಪ್ರಕರಣ: ಕೋರ್ಟ್‌ನಿಂದ ಭಿನ್ನ ತೀರ್ಪು

ಟಿಡಿಪಿ ಮುಖ್ಯಸ್ಥರ ಅರ್ಜಿ ಕುರಿತ ಮುಂದಿನ ಕ್ರಮ ಏನು ಎಂಬುದನ್ನು ನಿರ್ಧರಿಸಲಿರುವ ಸಿಜೆಐ

ಪಿಟಿಐ
Published 16 ಜನವರಿ 2024, 16:26 IST
Last Updated 16 ಜನವರಿ 2024, 16:26 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ನವದೆಹಲಿ: ಕೌಶಲ ಅಭಿವೃದ್ಧಿ ನಿಗಮದ ಹಗರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಭಿನ್ನಮತದ ತೀರ್ಪು ನೀಡಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ‘ಸೆಕ್ಷನ್‌ 17ಎ’ಯ ವ್ಯಾಖ್ಯಾನ ಹಾಗೂ ಅದರ ಅನ್ವಯದ ವಿಚಾರದಲ್ಲಿ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರಲ್ಲಿ ಒಮ್ಮತ ಮೂಡಿಲ್ಲ.

2018ರ ಜುಲೈನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಸೆಕ್ಷನ್ 17ಎ ಸೇರಿಸಲಾಗಿದೆ. ಸಾರ್ವಜನಿಕ ಸೇವಕನ ವಿರುದ್ಧ ಈ ಕಾಯ್ದೆಯ ಅಡಿಯಲ್ಲಿ ವಿಚಾರಣೆ, ತನಿಖೆ ಆರಂಭಿಸಲು ಪೊಲೀಸ್ ಅಧಿಕಾರಿಯು ಸಕ್ಷಮ ಪ್ರಾಧಿಕಾರದಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಈ ಸೆಕ್ಷನ್ ಹೇಳುತ್ತದೆ.

ADVERTISEMENT

ನಾಯ್ದು ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಪತಿ ಪಡೆಯಬೇಕಿತ್ತು ಎಂದು ನ್ಯಾಯಮೂರ್ತಿ ಬೋಸ್ ಹೇಳಿದ್ದಾರೆ. ಆದರೆ ನ್ಯಾಯಮೂರ್ತಿ ತ್ರಿವೇದಿ ಅವರು, ಈ ಸೆಕ್ಷನ್‌ಅನ್ನು ಪೂರ್ವಾನ್ವಯಗೊಳಿಸಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ನಾಯ್ದು ಅವರು 2015ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಕೌಶಲ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದ ಅಡಿಯಲ್ಲಿ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 9ರಂದು ಬಂಧಿಸಲಾಗಿತ್ತು. ಆರೋಪಗಳನ್ನು ನಾಯ್ಡು ಅಲ್ಲಗಳೆದಿದ್ದಾರೆ.

ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆಯೇ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಕಾರಣ, ತಮ್ಮ ಬಂಧನವು ಕಾನೂನುಬಾಹಿರ ಎಂದು ನಾಯ್ಡು ಅವರು ವಾದಿಸಿದ್ದರು.

ಆದರೆ, ಹೊಸ ಸೆಕ್ಷನ್‌ ಜಾರಿಗೆ ಬಂದಿದ್ದು 2018ರ ಜುಲೈನಿಂದ. ಸಿಬಿಐ ಅಧಿಕಾರಿಗಳು ನಾಯ್ಡು ವಿರುದ್ಧ 2017ರಿಂದಲೇ ತನಿಖೆ ಆರಂಭಿಸಿದ್ದಾರೆ. ಹೀಗಾಗಿ, ನಾಯ್ಡು ಅವರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು ಪ್ರತಿವಾದ ಮಂಡಿಸಿದ್ದರು.

ಇಬ್ಬರೂ ನ್ಯಾಯಮೂರ್ತಿಗಳು ಭಿನ್ನ ನಿಲುವು ತಾಳಿರುವ ಕಾರಣ ಈಗ ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಅವಗಾಹನೆಗೆ ತರಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.