ನವದೆಹಲಿ: ಚೌಧರಿ ಚರಣ್‌ಸಿಂಗ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿರುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಶನಿವಾರ ಸ್ವಾಗತಿಸಿದೆ. ಆದರೆ, ಇದು ಸ್ವಾಮಿನಾಥನ್ ಸಮಿತಿ ಶಿಫಾರಸು ಮಾಡಿದಂತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಸರ್ಕಾರದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನವಾಗಿದೆ ಎಂದು ಎಸ್‌ಕೆಎಂ ಟೀಕಿಸಿದೆ.
‘ಭಾರತ ರತ್ನ’ ಇಲ್ಲದೆಯೂ ಚರಣ್ ಸಿಂಗ್ ಮತ್ತು ಸ್ವಾಮಿನಾಥನ್ ಅವರು ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯಿಂದಾಗಿ ಜನರ ಸ್ಮೃತಿಯಲ್ಲಿ ಉಳಿಯುತ್ತಾರೆ. ಆದರೆ, ಕೃಷಿಕರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋತಿದ್ದಾರೆ‘ ಎಂದು ಎಸ್‌ಕೆಎಂ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಮೋದಿ ಸರ್ಕಾರವು ಜನರನ್ನು ಮತ್ತು ರೈತರನ್ನು ವಂಚಿಸಲು ಮಾತ್ರವೇ ನಾಯಕರಿಗೆ ಗೌರವ ಸಮರ್ಪಣೆ ಮಾಡುತ್ತಿದೆ. ಪ್ರಧಾನಿ ಅವರಲ್ಲಿ ಪ್ರಾಮಾಣಿಕತೆಯಾಗಲಿ, ಸಾಚಾತನವಾಗಲಿ ಇಲ್ಲ. ಅವರು ಮತ ಸೆಳೆಯುವ ದುರ್ಬಲ ಗಿಮಿಕ್‌ಗಳಲ್ಲಿ ತೊಡಗಿ ರೈತರ ಸಂಕಟವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳೊಂದಿಗೆ ಕೈಜೋಡಿಸಿರುವ ಕಾರ್ಪೊರೇಟ್ ಶಕ್ತಿಗಳಿಗೆ ತಾವು ಅನುಕೂಲ ಮಾಡಿಕೊಡುತ್ತಿರುವುದನ್ನು ಮರೆಮಾಚಲು ನಟನೆ ಮಾಡುತ್ತಿದ್ದಾರೆ’ ಎಂದು ಎಸ್‌ಕೆಎಂ ಉಗ್ರವಾಗಿ ಟೀಕಿಸಿದೆ.
ಲೋಕಸಭಾ ಚುನಾವಣೆಯು ಸನ್ನಿಹಿತವಾಗುತ್ತಿರುವುದರಿಂದ ತಮ್ಮ ನೀತಿಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರವು ಹಲವು ರೀತಿಯ ತೋರಿಕೆಯ ಕ್ರಿಯೆಗಳಲ್ಲಿ ತೊಡಗಿದೆ ಎಂದು ಎಸ್‌ಕೆಎಂ ಆರೋಪಿಸಿದೆ.
ಎಸ್‌ಕೆಎಂ ಮತ್ತು ಕಾರ್ಮಿಕ ಒಕ್ಕೂಟಗಳ ಜಂಟಿ ವೇದಿಕೆಯು ಫೆಬ್ರುವರಿ 16ರಂದು ರಾಷ್ಟ್ರಮಟ್ಟದ ಗ್ರಾಮೀಣ ಬಂದ್ ಮತ್ತು ಕೈಗಾರಿಕಾ ಮುಷ್ಕರಕ್ಕೆ ಕರೆ ನೀಡಿವೆ. ಅದಕ್ಕೆ ಇತರ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.