ADVERTISEMENT

ಮುಜಫ್ಫರಪುರ ಆಸ್ಪತ್ರೆಯಲ್ಲಿ ಅಸ್ಥಿಪಂಜರ ಪತ್ತೆ; ಮಾಧ್ಯಮಗಳ ಮೇಲೆ ಸಚಿವ ಗರಂ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 11:19 IST
Last Updated 23 ಜೂನ್ 2019, 11:19 IST
ಅಶೋಕ್ ಚೌಧರಿ
ಅಶೋಕ್ ಚೌಧರಿ   

ಮುಜಫ್ಫರಪುರ: ಇಲ್ಲಿನ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ (ಎಸ್‌ಕೆಎಂಸಿಎಚ್‌) ಮರಣೋತ್ತರ ಪರೀಕ್ಷೆ ವಿಭಾಗದ ಬಳಿಯ ಗಟಾರಿನಲ್ಲಿ ಮಾನವನ ಅಸ್ಥಿಪಂಜರದ ಭಾಗಗಳು ಶನಿವಾರ ಪತ್ತೆಯಾಗಿತ್ತು.ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರದ ಸಚಿವ ಅಶೋಕ್ ಚೌಧರಿ, ಇದು ವಾರಸುದಾರರಿಲ್ಲದ ಶವಗಳ ಅಸ್ಥಿಪಂಜರವಾಗಿರಬಹುದು ಎಂದಿದ್ದಾರೆ.

‘ವಾರಸುದಾರರು ಇಲ್ಲದ ಮೃತದೇಹಗಳನ್ನು ಸುಡುವುದಕ್ಕಾಗಿ ಸರ್ಕಾರ ಮರಣೋತ್ತರಪರೀಕ್ಷೆ ವಿಭಾಗಕ್ಕೆ ಸರ್ಕಾರ₹2,000 ನೀಡುತ್ತದೆ.ಆದರೆ ಅವರು ಈ ಕಾರ್ಯವನ್ನು ಮಾಡುವುದಿಲ್ಲ.ಈ ಬಗ್ಗೆ ತನಿಖೆ ನಡೆದು ಸತ್ಯ ಹೊರಬರಲಿದೆ.ಮಾಧ್ಯಮಗಳು ಇದನ್ನು ಭಿನ್ನವಾಗಿ ವ್ಯಾಖ್ಯಾನಿಸುತ್ತಿವೆ ಎಂದು ಚೌಧರಿ ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆಯಾಗಿರುವ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆ ಉತ್ತರ ಬಿಹಾರದ ಪ್ರಮುಖ ಆಸ್ಪತ್ರೆ ಎಂದೇ ಪರಿಗಣಿಸಲ್ಪಟ್ಟಿದೆ.ವಾರಸುದಾರರು ಇಲ್ಲದ ಅನೇಕ ಶವಗಳ ಮರಣೋತ್ತರ ಪರೀಕ್ಷೆ ಇಲ್ಲಿ ನಡೆಯುತ್ತದೆ.ಯಾವುದಾದರೂ ಶವವನ್ನು 72 ಗಂಟೆಯೊಳಗೆ ಯಾರೂ ಕೊಂಡೊಯ್ಯದಿದ್ದರೆ ಆ ಶವವನ್ನು ಆ ಧರ್ಮದ ಪ್ರಕಾರ ಅಂತ್ಯಕ್ರಿಯೆ ಮಾಡುವ ಕೆಲಸ ಮರಣೋತ್ತರ ಪರೀಕ್ಷೆ ವಿಭಾಗದ್ದಾಗಿದೆ.

ADVERTISEMENT

ಮಿದುಳಿನ ತೀವ್ರ ಉರಿಯೂತದಿಂದ (ಎಇಎಸ್‌) ಬಳಲುತ್ತಿದ್ದ ನೂರಾರು ಮಕ್ಕಳನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ, 100ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ ನಂತರ ಈ ಆಸ್ಪತ್ರೆ ಸುದ್ದಿಯಲ್ಲಿದೆ.

‘ವಾರಸುದಾರರು ಇಲ್ಲದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಹೂಳಲಾಗುತ್ತದೆ. ಅಸ್ಥಿಪಂಜರದ ಭಾಗಗಳು ಸಹ ಶವಗಳನ್ನು ಹೂಳುವ ಸ್ಥಳದಲ್ಲಿಯೇ ದೊರೆತಿವೆ. ಮರಣೋತ್ತರ ಪರೀಕ್ಷೆ ವಿಭಾಗವು ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲರ ನಿಯಂತ್ರಣದಲ್ಲಿದೆ. ಹೀಗಾಗಿ ಸಮಿತಿಯೊಂದನ್ನು ರಚಿಸಿ, ತನಿಖೆ ನಡೆಸುವಂತೆ ಪ್ರಾಂಶುಪಾಲರಿಗೆ ತಿಳಿಸಿದ್ದೇನೆ’ ಎಂದು ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ.ಸುನೀಲ್‌ಕುಮಾರ್‌ ಶಾಹಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.