ಪ್ರಯಾಗರಾಜ್: ಗುಂಡೇಟಿನಿಂದ ಹತ್ಯೆಗೀಡಾದ ಪಾತಕಿ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಅವರಿಗೆ ಸೇರಿದ ₹6 ಕೋಟಿ ಮೌಲ್ಯದ ನಿವೇಶನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತೀಕ್ ಅಹ್ಮದ್ ತನ್ನ ಆಪ್ತ ಶ್ಯಾಮ್‌ಜಿ ಸರೋಜ್ ಹೆಸರಿನಲ್ಲಿ ನಿವೇಶನಗಳನ್ನು ಖರೀದಿಸಿರುವುದು ಪತ್ತೆಯಾಗಿದೆ. ಈ ನಿವೇಶನಗಳು ಸುಮಾರು 1,344 ಚದರ ಮೀಟರ್‌ಗಳಷ್ಟಿದ್ದು, ₹6 ಕೋಟಿ ಮೌಲ್ಯದ್ದಾಗಿದೆ ಎಂದು ಎಸಿಪಿ ಶ್ವೇತಾಭ್ ಪಾಂಡೆ ತಿಳಿಸಿದ್ದಾರೆ.
ಅಪರಾಧ ಕೃತ್ಯಗಳಿಂದ ಗಳಿಸಿದ ಹಣ ಹಾಗೂ ರಾಜಕೀಯ ಪ್ರಭಾವದಿಂದ ಅಹ್ಮದ್ ಸಂಪಾದಿಸಿದ ಸ್ಥಿರಾಸ್ತಿಯನ್ನು ಗ್ಯಾಂಗ್‌ಸ್ಟರ್ ಕಾಯ್ದೆ ಸೆಕ್ಷನ್ 14 (1) ಅಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿದ್ದ ಉಮೇಶ್ ಪಾಲ್ ಅವರನ್ನು ಫೆಬ್ರುವರಿ 24ರಂದು ಪ್ರಯಾಗ್‌ರಾಜ್‌ನಲ್ಲಿ ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಉಮೇಶ್ ಪಾಲ್ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಅತೀಕ್ ಅಹ್ಮದ್, ಆತನ ಸಹೋದರ ಆಶ್ರಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಹ ಆರೋಪಿಗಳೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಫುಲ್‌ಪುರ ಕ್ಷೇತ್ರದ ಮಾಜಿ ಸಂಸದ ಅತೀಕ್, ಅವರ ತಮ್ಮ ಮಾಜಿ ಶಾಸಕ ಅಶ್ರಫ್‌ರನ್ನು ಪೊಲೀಸ್ ವಶದಲ್ಲಿದ್ದಂತೆಯೇ 2023ರ ಏ.15ರಂದು ವೈದ್ಯಕೀಯ ತಪಾಸಣೆಗೆ ಒಯ್ಯುವಾಗ ಹತ್ಯೆಯಾಗಿತ್ತು. ಅತೀಕ್ ಪುತ್ರ ಅಸದ್‌ನನ್ನು ಝಾನ್ಸಿಯಲ್ಲಿ ಏ.13ರಂದು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.