ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲೆ ಭಾಷಣ ಮಾಡಿ ಸಂಸತ್‌ನಿಂದ ತೆರಳುವಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ ಹಾರು ಮುತ್ತು ಇದೀಗ ಅವರ ಸುತ್ತ ಮತ್ತೊಂದು ವಿವಾದ ಹುಟ್ಟುಹಾಕಿದೆ.
ರಾಹುಲ್ ಗಾಂಧಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಸಂಸದೆಯರು, ‘ಸ್ತ್ರೀದ್ವೇಷಿ ಹಾಗೂ ಘನತೆ ಇಲ್ಲದ ವ್ಯಕ್ತಿ ಮಾತ್ರ ಇಂಥ ಕೆಲಸ ಮಾಡಬಲ್ಲ’ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ‘ಸಂಸತ್‌ನಲ್ಲಿ ಇಂಥ ನಡವಳಿಕೆ ಹಿಂದೆಂದೂ ಕಂಡುಬಂದಿರಲಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಗಂಭೀರ ಚರ್ಚೆಗಳು ನಡೆಯುವ ಹಾಗೂ ನೀತಿಗಳು ರೂಪಿತವಾಗುವ ಪವಿತ್ರ ಸ್ಥಳದಲ್ಲಿ ರಾಹುಲ್ ಗಾಂಧಿ ವರ್ತನೆ ಮಹಿಳೆಯ ಘನತೆಯನ್ನೇ ಕಳೆದಿದೆ. ಇಂಥ ವಿಷಯದಲ್ಲಿ ಅವರನ್ನು ಏಕೆ ತರಾಟೆಗೆ ತೆಗೆದುಕೊಳ್ಳಬಾರದು?’ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೊಂದ ಮಹಿಳಾ ಸಂಸದರು ಲಿಖಿತ ದೂರು ನೀಡಿ, ‘ಸ್ಮೃತಿ ಇರಾನಿ ಕಡೆ ಫ್ಲೈಯಿಂಗ್ ಕಿಸ್ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಶೋಭಾ ಕರಂದ್ಲಾಜೆ ಸೇರಿದಂತೆ ಎನ್‌ಡಿಎದ ಎಲ್ಲಾ ಮಹಿಳಾ ಸಂಸದರು ಸಹಿ ಮಾಡಿದ್ದಾರೆ.
‘ಮಣಿಪುರ ವಿಷಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತ ಮಾತೆಯ ಹತ್ಯೆಯಾಗಿದೆ’ ಎಂದಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ಮಾತಿಗೆ ಮೇಜು ಕುಟ್ಟಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನೀವು ‘ಇಂಡಿಯಾ’ ಅಲ್ಲವೇ ಅಲ್ಲ. ಏಕೆಂದರೆ ಭಾರತದಲ್ಲಿ ಭ್ರಷ್ಟಾಚಾರ ತಂದವರು ನೀವು. ಅಸಮರ್ಥತೆಯನ್ನು ತುಂಬಿದವರು ನೀವು’ ಎಂದು ಆರೋಪಿಸಿದರು.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ 2ನೇ ದಿನವಾದ ಬುಧವಾರ ಮಾತನಾಡಿದ ರಾಹುಲ್ ಗಾಂಧಿ, ‘ಮಣಿಪುರ ಅಕ್ಷರಶಃ ಎರಡು ಭಾಗವಾಗಿದೆ. ಆಡಳಿತ ನಡೆಸುವ ಸರ್ಕಾರದ ರಾಜಕೀಯದಿಂದಾಗಿ ರಾಜ್ಯದಲ್ಲಿ ಭಾರತದ ಕೊಲೆಯಾಗಿದೆ. ಭಾರತ ಮಾತೆಯ ರಕ್ಷಕರು ಖಂಡಿತಾ ನೀವಲ್ಲ’ ಎಂದು ಆರೋಪಿಸಿದರು.
ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ, ‘ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಮಣಿಪುರ ವಿಷಯದಲ್ಲಿ ಪ್ರಧಾನಿ ಅವರ ದೀರ್ಘ ಕಾಲದ ಮೌನವನ್ನು ಮುರಿಯಬೇಕು ಎಂದು ಆಗ್ರಹಿಸುತ್ತಿವೆ’ ಎಂದಿದ್ದರು.
ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಸತ್‌ನಲ್ಲಿ ಉತ್ತರ ನೀಡಲಿದ್ದಾರೆ. ಮಂಗಳವಾರ ನಡೆದ ಬಿಜೆಪಿಯ ಸಂಸದೀಯ ಮಂಡಳಿಯ ಸಭೆಯಲ್ಲಿ ಇದು ತೀರ್ಮಾನಗೊಂಡಿರುವ ಕುರಿತು ವರದಿಯಾಗಿದೆ.
ಮುಂಗಾರು ಅಧಿವೇಶನ ಜುಲೈ 20ರಂದು ಆರಂಭವಾಗಿದೆ. ಮಣಿಪುರದ ಗಲಭೆಯಲ್ಲಿ ಸುಮಾರು 170 ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ನೂರಾರು ಜನ ರಾಜ್ಯ ತೊರೆದಿರುವ ವಿಷಯ ಕುರಿತು ಪ್ರಧಾನಿ ಮಾತನಾಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸಿದ್ದವು.
ಇದೇ ವಿಷಯವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಮಣಿಪುರ ವಿಷಯದಲ್ಲಿ ಚರ್ಚೆ ನಡೆಸಲು ವಿರೋಧ ಪಕ್ಷಗಳು ಸಿದ್ಧರಿಲ್ಲ. ಮಣಿಪುರ ವಿಷಯದಲ್ಲಿ ಮತದ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಲಿಚ್ಛಿಸಿರುವ ವಿರೋಧ ಪಕ್ಷಗಳು, ದೆಹಲಿ ಸೇವಾ ನಿಯಂತ್ರಣ ಮಸೂದೆಯನ್ನು ತಾವು ನಂಬಿರುವ ಶಕ್ತಿಯ ಮೂಲಕವೇ ವಿಫಲಗೊಳಿಸಲಿ’ ಎಂದು ಸವಾಲು ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.