ನವದೆಹಲಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಇರಾನಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.
ಆದರೆ, ಕಾಂಗ್ರೆಸ್ ಆರೋಪಗಳನ್ನು ಸ್ಮೃತಿ ಇರಾನಿ ಅಲ್ಲಗಳೆದಿದ್ದಾರೆ.
ಈ ವಿಚಾರವಾಗಿ ಇರಾನಿ ಅವರ ಪುತ್ರಿ ಪರ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದು, ತಮ್ಮ ಕಕ್ಷಿದಾರರು ‘ಸಿಲ್ಲಿ ಸೋಲ್ಸ್ ಗೋವಾ’ ರೆಸ್ಟೋರೆಂಟ್‌ನ ಮಾಲೀಕರಲ್ಲ ಮತ್ತು ಅದನ್ನು ನಡೆಸುತ್ತಿಲ್ಲ. ಯಾವುದೇ ಪ್ರಾಧಿಕಾರದಿಂದ ನೋಟಿಸ್ ಅನ್ನೂ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಕಕ್ಷಿದಾರರ ತಾಯಿ, ಖ್ಯಾತ ರಾಜಕಾರಣಿ ಸ್ಮೃತಿ ಇರಾನಿ ವಿರುದ್ಧ ರಾಜಕೀಯ ಲಾಭ ಪಡೆಯುವುದಕ್ಕೋಸ್ಕರ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ, ಮಾನಹಾನಿಕರ ಸಂದೇಶಗಳನ್ನು ಪ್ರಕಟಿಸಿದ್ದಾರೆ. ಸುಳ್ಳುಗಳನ್ನು ಹೆಣೆದಿದ್ದಾರೆ ಎಂದು ವಕೀಲರು ದೂರಿದ್ದಾರೆ.
ಆರೋಪಗಳು ಆಧಾರರಹಿತ ಎಂದಿರುವ ಅವರು, ವಾಸ್ತವಾಂಶ ಪರಿಶೀಲಿಸದೆ ಸುಳ್ಳು ಪ್ರಚಾರ ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೇಳಿದ್ದೇನು?
ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬಾರ್‌ಗೆ ನೀಡಲಾಗಿತ್ತು ಎನ್ನಲಾದ ಶೋಕಾಸ್ ನೋಟಿಸ್‌ನ ಪ್ರತಿಯನ್ನೂ ಹಂಚಿಕೊಂಡಿರುವ ಕಾಂಗ್ರೆಸ್, ನೋಟಿಸ್ ನೀಡಿದ ಅಬಕಾರಿ ಇಲಾಖೆ ಅಧಿಕಾರಿಯನ್ನು ಮೇಲಧಿಕಾರಿಗಳ ಒತ್ತಡದ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ದೂರಿದೆ.
ಸ್ಮೃತಿ ಇರಾನಿ ಹಾಗೂ ಅವರ ಮಗಳ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳಿವೆ. ಇರಾನಿ ಅವರ ಮಗಳು ನಕಲಿ ಪರವಾನಗಿಯೊಂದಿಗೆ ಗೋವಾದಲ್ಲಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.