ADVERTISEMENT

ಪಶ್ಚಿಮ ಬಂಗಾಳ: ಯೋಧನಿಗೆ ಡ್ಯಾಗರ್‌ನಿಂದ ದಾಳಿ ಮಾಡಿ ಚಿನ್ನ ಕಳ್ಳಸಾಗಣೆದಾರ ಪರಾರಿ

ಪಿಟಿಐ
Published 19 ಆಗಸ್ಟ್ 2024, 9:27 IST
Last Updated 19 ಆಗಸ್ಟ್ 2024, 9:27 IST
<div class="paragraphs"><p>ಡ್ಯಾಗರ್</p></div>

ಡ್ಯಾಗರ್

   

– ಐಸ್ಟಾಕ್ ಚಿತ್ರ

ನಾಡಿಯಾ: 6 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭಾರತ–ಬಾಂಗ್ಲಾದೇಶದ ಗಡಿಯಲ್ಲಿ ತಪಾಸಣೆ ನಡೆಸುತ್ತಿದ್ದ ಬಿ.ಎಸ್‌.ಎಫ್ ಯೋಧನ ಮೇಲೆ ಸೋಮವಾರ ಡ್ಯಾಗರ್‌ನಿಂದ ದಾಳಿ ನಡೆಸಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ಘಟನೆಯಲ್ಲಿ ಯೋಧ ಗಾಯಗೊಂಡಿದ್ದು, ವ್ಯಕ್ತಿ ಚಿನ್ನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಸೋಮವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ವಿಜಯಪುರ ಎಂಬಲ್ಲಿನ ಬಿದಿರು ಹಾಗೂ ಬಾಳೆ ತೋಟದ ಸಮೀಪ ಈ ಘಟನೆ ನಡೆದಿದೆ.

ಸುಮಾರು 6 ಕೆ.ಜಿ ತೂಗುತ್ತಿದ್ದ 22 ಚಿನ್ನದ ಬಿಸ್ಕತ್ತು ಹಾಗೂ 2 ಚಿನ್ನದ ಗಟ್ಟಿಯನ್ನು ಸೊಂಟದಲ್ಲಿ ಕಟ್ಟಿಕೊಂಡು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಗಡಿ ಸಮೀಪ ಭದ್ರತಾ ಪಡೆಯ ಯೋಧನೊಬ್ಬ ಆತನ ತಪಾಸಣೆ ನಡೆಸಿದ್ದು, ಈ ವೇಳೆ ಡ್ಯಾಗರ್‌ನಿಂದ ದಾಳಿ ಮಾಡಿದ್ದಾನೆ ಎಂದು ಗೊತ್ತಾಗಿದೆ.

32ನೇ ಬೆಟಾಲಿಯನ್‌ಗೆ ಸೇರಿದ ಯೋಧನ ಸಮವಸ್ತ್ರ, ದಾಳಿಯಿಂದಾಗಿ ಭುಜದ ಬಳಿ ಹರಿದಿದೆ. ಕೂಡಲೆ ಒಂದು ಸುತ್ತಿನ ಗುಂಡಿನ ದಾಳಿ ನಡೆಸಿದರೂ, ದಾಳಿಕೋರ ತಪ್ಪಿಸಿಕೊಂಡಿದ್ದಾನೆ.

ಸಮೀಪದಲ್ಲೇ ಹಲವು ರೈತರು ಕೆಲಸ ಮಾಡುತ್ತಿದ್ದರಿಂದ ಯೋಧ ಹೆಚ್ಚಿನ ಗುಂಡು ಹಾರಿಸಲಿಲ್ಲ. ವಶಪಡಿಸಿಕೊಂಡ ಚಿನ್ನವನ್ನು ಕಂದಾಯ ಗುಪ್ತಚರ ಪಡೆಯ ನಿರ್ದೇಶಕರಿಗೆ ಬಿ.ಎಸ್.ಎಫ್‌ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.