ಶಿಮ್ಲಾ: ಹಿಮಾಚಲ ಪ್ರದೇಶದ ಬುಡಕಟ್ಟು ಪ್ರದೇಶಗಳು ಮತ್ತು ಎತ್ತರದ ಬೆಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಹಿಮಪಾತದಿಂದಾಗಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಕನಿಷ್ಠ 228 ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿದೆ. ಇದೇ ವೇಳೆ ರಾಜ್ಯದ ಕೆಲವೆಡೆ ಭಾರಿ ಮಳೆಯೂ ಆಗಿದೆ.
ಕಳೆದ 24 ಗಂಟೆಗಳಲ್ಲಿ ರೋಹ್ಟಾಂಗ್ ಪಾಸ್ ಪ್ರದೇಶದಲ್ಲಿ ಅತಿ ಹೆಚ್ಚು 135 ಸೆಂ.ಮೀ ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಿಲ್ಲರ್ (ಪಾಂಗಿ) 90 ಸೆಂ.ಮೀ, ಚಿತ್ಕುಲ್ ಮತ್ತು ಜಲೋರಿ ಜೋಟ್ 45 ಸೆಂ.ಮೀ, ಕುಕುಮ್ಸೇರಿ 44 ಸೆಂ.ಮೀ ಮತ್ತು ಗೊಂಡ್ಲಾದಲ್ಲಿ 39 ಸೆಂ.ಮೀ ಹಿಮಪಾತವಾಗಿದೆ.
ರಾಜ್ಯದ ಡಾಲ್‌ಹೌಸಿ, ಸೋಲನ್, ಶಿಮ್ಲಾ ಮತ್ತು ಧರ್ಮಶಾಲಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಹಮೀರ್‌ಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು (ಮಂಗಳವಾರ) ಬೆಳಿಗ್ಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಒಟ್ಟು 165 ರಸ್ತೆಗಳನ್ನು ಮತ್ತು ಚಂಬಾದ 52 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಹಿಮಪಾತದಿಂದಾಗಿ ಶಿಮ್ಲಾ ಜಿಲ್ಲೆಯ ದೊಡ್ರಾ ಕ್ವಾರ್ ಕೂಡ ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಂಡಿದೆ.
ಇಂದು (ಮಂಗಳವಾರ) ಸುರಿದ ಭಾರಿ ಮಳೆಯಿಂದಾಗಿ ಚಂಬಾ-ತಿಸ್ಸಾ ರಸ್ತೆಯ ಪ್ರಮುಖ ಭಾಗವು ರಾಖಲು ಮಾತಾ ದೇವಸ್ಥಾನದ ಮುಳುಗಡೆಯಾಗಿದೆ. ಇದರಿಂದಾಗಿ ಜಿಲ್ಲಾ ಕೇಂದ್ರದಿಂದ 40 ಪಂಚಾಯಿತಿಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸಿಸ್ಸು, ಸೋಲಾಂಗ್, ಅಟಲ್ ಸುರಂಗ ಮತ್ತು ರೋಹ್ಟಾಂಗ್‌ನಲ್ಲಿ ಸುರಿಯುತ್ತಿರುವ ಭಾರಿ ಹಿಮಪಾತದಿಂದಾಗಿ ಮನಾಲಿಯಿಂದ ಆಚೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ನಾಳೆಯು (ಬುಧವಾರ) ಲಾಹೌಲ್, ಸ್ಪಿತಿ, ಕಿನ್ನೌರ್, ಚಂಬಾ ಮತ್ತು ಕುಲ್ಲುವಿನ ಎತ್ತರದ ಬೆಟ್ಟಗಳು, ಚಂಬಾ, ಮಂಡಿ ಮತ್ತು ಶಿಮ್ಲಾಗಳಲ್ಲಿ ಹೆಚ್ಚಿನ ಹಿಮಪಾತ ಮತ್ತು ಮಳೆ ಬೀಳಲಿದೆ ಎಂದು ಸ್ಥಳೀಯ ಹವಾಮಾನ ಕೇಂದ್ರವು ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.