ADVERTISEMENT

ಸಾಮಾಜಿಕ ಹೋರಾಟಗಾರರೂ ಆಗಿದ್ದ ಸ್ವಾಮಿ ಅಗ್ನಿವೇಶ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 19:24 IST
Last Updated 11 ಸೆಪ್ಟೆಂಬರ್ 2020, 19:24 IST
   

ನವದೆಹಲಿ: ಸಾಮಾಜಿಕ ಕಾಳಜಿ ಚಿಂತನೆ ಹೊಂದಿದ್ದ ಸ್ವಾಮಿ ಅಗ್ನಿವೇಶ್ ಅವರು, ಜೀತ ಪದ್ಧತಿ ಮತ್ತು ಬಾಲ ಕಾರ್ಮಿಕ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ನಿರಂತರ ಹೋರಾಟ ನಡೆಸಿದ್ದರು.

1939ರ ಸೆಪ್ಟೆಂಬರ್‌ 21ರಂದು ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಸ್ವಾಮಿ ಅಗ್ನಿವೇಶ್ ಅವರ ಮೂಲ ಹೆಸರು ವೆಪಾ ಶ್ಯಾಮ್‌ ರಾವ್‌. ಕಾನೂನು ಮತ್ತು ವ್ಯಾಪಾರ ನಿರ್ವಹಣೆಯಲ್ಲಿ ಪದವಿ ಪಡೆದಿದ್ದರು. ಕೋಲ್ಕತ್ತದಲ್ಲಿ ಪ್ರಾಧ್ಯಾಪಕರಾಗಿದ್ದ ಅಗ್ನಿವೇಶ್ ಅವರು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುವುದಕ್ಕಾಗಿಯೇ ಆ ವೃತ್ತಿಗೆ ವಿದಾಯ ಹೇಳಿದರು.

1970ರಲ್ಲಿ ಸನ್ಯಾಸಿಯಾದ ಅವರು ಸ್ವಾಮಿ ಅಗ್ನಿವೇಶ್‌ ಎಂದು ಪುನರ್‌ ನಾಮಕರಣಗೊಂಡರು. ಆರ್ಯ ಸಮಾಜದ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಅಗ್ನಿವೇಶ್‌ ಅವರು ಆರ್ಯ ಸಭಾ ಎನ್ನುವ ರಾಜಕೀಯ ಪಕ್ಷ ಸ್ಥಾಪಿಸಿದರು. 1975ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕೆ ಬಂಧನಕ್ಕೆ ಒಳಗಾಗಿದ್ದರು.

ADVERTISEMENT

ಜೀತದಾಳುಗಳ ವಿಮುಕ್ತಿಗಾಗಿ ಹೋರಾಡಲೆಂದು 1981ರಲ್ಲಿ ‘ಬಾಂಡೆಡ್ ಲೇಬರ್ ಲಿಬರೇಷನ್ ಫ್ರಂಟ್’ ಸ್ಥಾಪಿಸಿದ್ದರು. 2004ರಿಂದ 2014ರವರೆಗೆ ಆರ್ಯ ಸಮಾಜದ ವಿಶ್ವ ಮಂಡಳಿಯ ಅಧ್ಯಕ್ಷರಾಗಿದ್ದರು.1994ರಿಂದ 2004ರವರೆಗೆ ವಿಶ್ವಸಂಸ್ಥೆಯ ಜೀತ ವಿಮುಕ್ತಿ ನಿಧಿಯ ಅಧ್ಯಕ್ಷರಾಗಿದ್ದರು.

1977ರಲ್ಲಿ ಹರಿಯಾಣ ವಿಧಾನಸಭೆ ಆಯ್ಕೆಯಾಗಿದ್ದ ಅಗ್ನಿವೇಶ್‌ ಅವರು ಶಿಕ್ಷಣ ಸಚಿವರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ಹಿಸಿದ್ದರು. ಆದರೆ, ಜೀತ ಪದ್ಧತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಕಾರ್ಮಿಕರ ವಿರುದ್ಧ ಗುಂಡಿನ ದಾಳಿ ನಡೆಸಿದ್ದನ್ನು ಪ್ರತಿಭಟಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಉಗ್ರರ ದಾಳಿಗೆ ಕಾಶ್ಮೀರವು ತತ್ತರಿಸಿದ್ದ ಸಂದರ್ಭದಲ್ಲಿ, ಶಾಂತಿಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಅವರು ಕೈಗೊಂಡಿದ್ದರು. ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲೂ ಅಗ್ನಿವೇಶ್‌ ಅವರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.