ರಾಂಚಿ: ಹುಲಿ ಬೇಟೆಯ ನೆಲೆ ವಿಸ್ತರಿಸುವ ದೃಷ್ಟಿಯಿಂದ ಜಾರ್ಖಂಡ್‌ನ ಪಲಾಮು ಹುಲಿ ಸಂರಕ್ಷಿತ ಪ್ರದೇಶ(ಪಿಟಿಆರ್)ದಲ್ಲಿ ಜಿಂಕೆಗಳಿಗಾಗಿ ನಾಲ್ಕು ಸೂಕ್ಷ್ಮ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೊಮ್ಮೆ ಮಾವೋವಾದಿಗಳ ನೆಲೆಯಾಗಿದ್ದ ಬುದ್ಧ ಪಹಡ್‌ನಲ್ಲಿ ಐದನೇ ಸೂಕ್ಷ್ಮ ಕೇಂದ್ರವನ್ನು ನಿರ್ಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಟ್ಲಾ ಸಂರಕ್ಷಿತ ಪ್ರದೇಶದಿಂದ ಸೂಕ್ಷ್ಮ ತಾಣಗಳಿಗೆ ಜಿಂಕೆಗಳನ್ನು ಸ್ಥಳಾಂತರಿಸಲಾಗುವುದು. ನಮ್ಮ ಈ ಪ್ರಯತ್ನದಿಂದಾಗಿ ಪಿಟಿಆರ್‌ಗೆ ಹುಲಿಗಳು ಮರಳಿ ಬರುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ 70ರ ದಶಕದಲ್ಲಿ ರಚನೆಯಾದ 9 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪಿಟಿಆರ್ ಕೂಡ ಒಂದು. ಆದರೆ, 2018ರಲ್ಲಿ ಇಲ್ಲಿ ಹುಲಿ ಅಸ್ತಿತ್ವ ಇಲ್ಲ ಎಂದು ವರದಿಯಾಗಿತ್ತು. 2023ರ ಮಾರ್ಚ್‌ನಲ್ಲಿ ಮೂರು ವರ್ಷಗಳ ಬಳಿಕ ಪಿಟಿಆರ್‌ನಲ್ಲಿ ಹುಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.
ಹುಲ್ಲುಗಾವಲು ಅಭಿವೃದ್ಧಿ, ಚೆಕ್‌ಡ್ಯಾಮ್‌ಗಳನ್ನು ಈ ಸೂಕ್ಷ್ಮ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಆಗ ಹುಲಿಗಳ ಸಂಚಾರ ಹೆಚ್ಚಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಜಾರ್ಖಂಡ್‌ನ ಲತೇಹಾರ್ ಮತ್ತು ಗರ್ವಾ ಜಿಲ್ಲೆಗಳ ಉದ್ದಕ್ಕೂ ಇರುವ ಬುದ್ಧ ಪಹಾದ್‌ನ ತಪ್ಪಲಿನಲ್ಲಿ ಹುಲ್ಲುಗಾವಲು ಅಭಿವೃದ್ಧಿಪಡಿಸಲು ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಿಸಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ. ಕುಟ್ಕು ವಲಯದಲ್ಲಿರುವ ಬುದ್ಧ ಪಹದ್ ಜಾರ್ಖಂಡ್ ಮತ್ತು ಛತ್ತೀಸಗಢ ನಡುವಿನ ಹುಲಿ ಕಾರಿಡಾರ್ ಕೂಡ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.