ADVERTISEMENT

Aditya L1: ಜ. 6ರಂದು ನಿಗದಿತ ಬಿಂದು ಸೇರಲಿದೆ ನೌಕೆ– ಇಸ್ರೊ ಅಧ್ಯಕ್ಷ ಸೋಮನಾಥ್

ಪಿಟಿಐ
Published 23 ಡಿಸೆಂಬರ್ 2023, 4:10 IST
Last Updated 23 ಡಿಸೆಂಬರ್ 2023, 4:10 IST
<div class="paragraphs"><p>ಎಸ್. ಸೋಮನಾಥ್</p></div>

ಎಸ್. ಸೋಮನಾಥ್

   

ಅಹಮದಾಬಾದ್: ‘ಸೂರ್ಯನ ಅಧ್ಯಯನಕ್ಕಾಗಿ ಭಾರತ ನಿರ್ಮಿಸಿರುವ ಪ್ರಥಮ ಅಂತರಿಕ್ಷ ವೀಕ್ಷಣಾಲಯ ಆದಿತ್ಯ ಎಲ್‌1 ಯೋಜನೆಯ ನೌಕೆಯು ನಿಗದಿತ ಲಗ್ರಾಂಜಿಯನ್ ಬಿಂದು ಎಲ್ 1 ಅನ್ನು ಜ. 6ರಂದು ತಲುಪಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ವಿಜ್ಞಾನ ಭಾರತಿ ಎಂಬ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿರುವ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. 

ADVERTISEMENT

‘ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಎಲ್‌1ಗೆ ತಲುಪಲು ಸೆಪ್ಟೆಂಬರ್ 2ರಂದು ಶ್ರೀಹರಿಕೋಟದ ಇಸ್ರೊ ಉಡಾವಣಾ ಕೇಂದ್ರದಿಂದ 'ಆದಿತ್ಯ–ಎಲ್‌ 1' ನೌಕೆ ಹೊತ್ತ ಪಿಎಸ್‌ಎಲ್‌ವಿ–ಸಿ 57 ರಾಕೆಟ್‌ ನಭಕ್ಕೆ ಚಿಮ್ಮಿತ್ತು. ಒಂದು ಬಾರಿ ಎಲ್‌1 ಬಿಂದುವನ್ನು ನೌಕೆ ತಲುಪಿದ ನಂತರ, ಎಂಜಿನ್‌ ಅನ್ನು ಮರು ಆರಂಭಿಸಲಾಗುವುದು. ಇದರಿಂದ ನೌಕೆಯು ಮತ್ತೆ ಮುಂದೆ ಹೋಗದಂತೆ ಇದು ಕೆಲಸ ಮಾಡಲಿದೆ. ಜತೆಗೆ ಅಲ್ಲಿಯೇ ಸುತ್ತುತ್ತಾ ಎಲ್‌1ನಲ್ಲಿಯೇ ಸಿಲುಕಿಕೊಳ್ಳಲಿದೆ’ ಎಂದು ವಿವರಿಸಿದರು.

‘ಈ ಹಂತದ ನಂತರ ಮುಂದಿನ ಐದು ವರ್ಷಗಳವರೆಗೆ ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ನೌಕೆ ಗಮನಿಸುತ್ತದೆ. ಇದರಲ್ಲಿ ಅಳವಡಿಸಿರುವ ಉಪಕರಣಗಳು ಸಂಗ್ರಹಿಸುವ ಮಾಹಿತಿಯು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಬಹುಮುಖ್ಯವಾಗಿರಲಿದೆ’ ಎಂದು ಸೋಮನಾಥ್ ತಿಳಿಸಿದರು.

‘ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ. ಇವುಗಳಿಂದ ಲಭ್ಯವಾಗುವ ಮಾಹಿತಿಯು ಸೂರ್ಯನನ್ನು ಅರಿಯಲು ಹಾಗೂ ಅದು ಭೂಮಿಯ ಮೇಲಿರುವ ಜೀವಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬ ಅಂಶಗಳ ಕುರಿತು ಮಾಹಿತಿ ನೀಡಲಿದೆ’ ಎಂದರು.

ಭಾರತವು ಎಲ್ಲದರಲ್ಲೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ. ಆದರೆ ನಮ್ಮ ಸಾಮರ್ಥ್ಯ ಏನು ಎಂಬುದನ್ನು ಅರಿತು ಅದರಲ್ಲಿ ನಾವು ಹೆಚ್ಚಿನ ಗಮನ ಕೇಂದ್ರೀಕರಿಸಿದರೆ ಎಲ್ಲವೂ ಸಾಧ್ಯ.
ಎಸ್. ಸೋಮನಾಥ್, ಅಧ್ಯಕ್ಷ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

‘ಭಾರತದ್ದೇ ಆದ ಪ್ರತ್ಯೇಕ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಇಸ್ರೊ ಹಾಕಿಕೊಂಡಿದೆ. ಇದನ್ನು ‘ಭಾರತೀಯ ಸ್ಪೇಸ್ ಸ್ಟೇಷನ್‌’ ಎಂದು ಕರೆಯಲಾಗುವುದು. ‍ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ‘ಅಮೃತ್‌ ಕಾಲ್‌’ನಲ್ಲಿ ಇದನ್ನು ಸ್ಥಾಪಿಸಲಾಗುವುದು. ಆ ಮೂಲಕ ಹೊಸ ತಲೆಮಾರಿಗೆ ಹೊಸ ಬಗೆಯ ಆರ್ಥಿಕತೆಯನ್ನು ಸೃಷ್ಟಿಸುವ ಯೋಜನೆ ಹೊಂದಲಾಗಿದೆ’ ಎಂದು ಸೋಮನಾಥ್ ಹೇಳಿದರು. 

ಆದಿತ್ಯ ಎಲ್‌ 1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು, ಒಟ್ಟು ಏಳು ಉಪಕರಣಗಳು ಇವೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್‌ ಬಿಂದುವಿನಲ್ಲಿ ಆದಿತ್ಯ ಎಲ್‌–1 ಅಂತರಿಕ್ಷ ವೀಕ್ಷಣಾಲಯವನ್ನುಇರಿಸಲಾಗುತ್ತದೆ. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.