ಚೆನ್ನೈ: ಅಮೆರಿಕದ ಡೆವಲೆಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನ (ಡಿಎಫ್‌ಸಿ) ನೆರವಿನಲ್ಲಿ ಸ್ಥಾಪಿಸಿರುವ ಸೌರ ಫಲಕಗಳು ಹಾಗೂ ಇತರ ಪರಿಕರಗಳನ್ನು ಉತ್ಪಾದಿಸುವ ಸೌಲಭ್ಯವನ್ನು ಈಚೆಗೆ ಉದ್ಘಾಟಿಸಲಾಯಿತು.
ಉದ್ಘಾಟನೆ ಬಳಿಕ ನಡೆದ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಡಿಎಫ್‌ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಕಾಟ್ ನೇಥನ್, ‘ಈ ಘಟಕ ಸ್ಥಾಪನೆಗೆ ಸಂಸ್ಥೆಯು ₹ 4 ಸಾವಿರ ಕೋಟಿ ಸಾಲ ಒದಗಿಸಿದೆ. ಈ ಹಣಕಾಸು ನೆರವು ಭಾರತವು ಅಮೆರಿಕದ ಪ್ರಮುಖ ಪಾಲುದಾರ ದೇಶ ಎಂಬುದನ್ನು ತೋರಿಸುತ್ತದೆ’ ಎಂದರು.
‘ಡಿಸಿಎಫ್ ನೆರವಿನೊಂದಿಗೆ ಆರಂಭವಾಗಿರುವ ಈ ಘಟಕವು ನಿರ್ಮಾಣ ಹಂತದಲ್ಲಿ 2 ಸಾವಿರ ಉದ್ಯೋಗಗಳನ್ನು ಸೃಷ್ಟಿಸಿತ್ತು. ಈ ಪೈಕಿ ಶೇ 40ರಷ್ಟು ಮಹಿಳೆಯರು ಇದ್ದರು. ಈ ಕ್ರಮವು ಸೌರ ಫಲಕ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ’ ಎಂದೂ ಹೇಳಿದರು.
‘ಜಗತ್ತಿನ ಹಲವಾರು ನವೋದ್ಯಮಗಳಲ್ಲಿ ಡಿಸಿಎಫ್ ಹೂಡಿಕೆ ಮಾಡಿದೆ. ಭಾರತದ ಖಾಸಗಿ ವಲಯದ ಉದ್ಯಮಗಳಲ್ಲಿಯೂ ಗಮನಾರ್ಹ ಹೂಡಿಕೆ ಮಾಡಿದೆ. ಭಾರತದಲ್ಲಿ ಬಯೋಸಿಮಿಲರ್ ಇನ್ಸುಲಿನ್ ಉತ್ಪಾದಿಸುವುದಕ್ಕಾಗಿ ಜಿನೆಸಿಸ್ ಬಯೋಲಾಜಿಕಲ್ ಕಂಪನಿಗೆ ನೆರವು ನೀಡಿದೆ. ಕಣ್ಣಿನ ಚಿಕಿತ್ಸಾಲಯಗಳ ಸ್ಥಾಪನೆಗೂ ಕೈಜೋಡಿಸಿದೆ’ ಎಂದು ಅವರು ಹೇಳಿದರು.
ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ, ‘ದುಬೈನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ‘ಸಿಒಪಿ28’ ಹವಾಮಾನ ಶೃಂಗಸಭೆ ನಿಗದಿಪಡಿಸಿರುವ ಗುರಿಗಳನ್ನು ಸಾಧಿಸಲು ಎಲ್ಲ ರಾಷ್ಟ್ರಗಳು ಶ್ರಮಿಸಬೇಕು’ ಎಂದರು.
‘ಚೆನ್ನೈನಲ್ಲಿ ಸ್ಥಾಪಿಸಲಾಗಿರುವ ಈ ಘಟಕವು ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿ ಉಪಕರಣಗಳ ಆಮದನ್ನು ತಗ್ಗಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್‌ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಹಾಡ್ಮಸ್, ಫರ್ಸ್ಟ್ ಸೋಲಾರ್‌ನ ಮುಖ್ಯಸ್ಥ ವಾಣಿಜ್ಯ ಅಧಿಕಾರಿ ಜಾರ್ಜ್ ಅಂತೊನ್, ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ.ರಾಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.