ADVERTISEMENT

‘ಹೆಂಡತಿಯನ್ನು ಅರೆಬೆತ್ತಲೆ ಮಾಡಿ ಥಳಿಸಿದ್ದಾರೆ, ರಕ್ಷಿಸಿ’ ಎಂದು ತಮಿಳುನಾಡಿನ ಯೋಧ ಮೊರೆ

ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರತ ಯೋಧ ಹವಾಲ್ದಾರ್ ಪ್ರಭಾಕರನ್ ಅವರು ವಿಡಿಯೊ ಮೂಲಕ ಮನವಿ: ಡಿಎಂಕೆ ಕಾರ್ಯಕರ್ತರ ಗೂಂಡಾಗಿರಿ ಎಂದು ಕೆಲವರ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2023, 6:31 IST
Last Updated 12 ಜೂನ್ 2023, 6:31 IST
ಪ್ರಭಾಕರನ್
ಪ್ರಭಾಕರನ್    

ಚೆನ್ನೈ: ಅಂಗಡಿ ತೆರವಿನ ವಿಚಾರವಾಗಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ನನ್ನ ಹೆಂಡತಿಯನ್ನು ಅರೆಬೆತ್ತಲೆ ಮಾಡಿ, ಥಳಿಸಿದ್ದಾರೆ ಎಂದು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ತಮಿಳುನಾಡು ಮೂಲದ ಯೋಧರೊಬ್ಬರು ವಿಡಿಯೊ ಮೂಲಕ ದೂರಿದ್ದಾರೆ.

ತಿರುವಣ್ಣಾಮಲೈ ಮೂಲದ ‘ಹವಾಲ್ದಾರ್’ ಪ್ರಭಾಕರನ್ ಎನ್ನುವರು ಜಮ್ಮು ಕಾಶ್ಮೀರದಲ್ಲಿ ಸದ್ಯ ಕರ್ತವ್ಯದಲ್ಲಿದ್ದು, ‘ತಿರುವಣ್ಣಾಮಲೈ ಜಿಲ್ಲೆಯ ಪಟವೇಡು ಎಂಬ ನನ್ನ ಗ್ರಾಮದಲ್ಲಿ ಹೆಂಡತಿಯನ್ನು ಅರೆಬೆತ್ತಲೆ ಮಾಡಿ, ಥಳಿಸಿದ್ದಾರೆ, ಅವರನ್ನು ರಕ್ಷಿಸಿ’ ಎಂದು ಅಲ್ಲಿಂದಲೇ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದು ತಮಿಳುನಾಡಿನಲ್ಲಿ ತಲ್ಲಣಕ್ಕೆ ಕಾರಣವಾಗಿದೆ.

ಸೇನೆಯ ನಿವೃತ್ತ ಯೋಧ ತ್ಯಾಗರಾಜನ್ ಎನ್ನುವರು ಈ ವಿಡಿಯೊವನ್ನು ಹಂಚಿಕೊಂಡಿ ತಮಿಳುನಾಡು ಸಿಎಂ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.

ADVERTISEMENT

ಆದರೆ, ಈ ಆರೋಪವನ್ನು ತಿರುವಣ್ಣಾಮಲೈ ಜಿಲ್ಲಾ ಪೊಲೀಸರು ತಳ್ಳಿಹಾಕಿದ್ದು, ‘ಮಹಿಳೆಯನ್ನು ಅರೆಬೆತ್ತಲೆಯಾಗಿ ಥಳಿಸಿರುವ ಘಟನೆ ನಮ್ಮಲ್ಲಿ ನಡೆದಿಲ್ಲ. ಇದು ಎರಡು ಗುಂಪುಳ ನಡುವಿನ ವಾಕ್ಸಮರ ಅಷ್ಟೇ. ಅದಾಗ್ಯೂ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ’ ಎಂದು ಟ್ವಿಟರ್‌ನಲ್ಲಿ ಪತ್ರಿಕಾ ಪ್ರಕಟಣೆ ಹಂಚಿಕೊಂಡಿದ್ದಾರೆ.

‘ಯೋಧನ ಕುಟುಂಬದವರಿಗೂ ಹಾಗೂ ಗ್ರಾಮದ ಸೆಲ್ವಮೂರ್ತಿ ಎನ್ನುವವರಿಗೆ ದೇವಸ್ಥಾನದ ಜಾಗವೊಂದರ ಅಂಗಡಿ ಬಗೆಗಿನ ತಕರಾರು ಇದು. ಯೋಧನ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದರು, ಅವರನ್ನು ನಮ್ಮ ಪೊಲೀಸರು ವಿಚಾರಿಸಿದ್ದು, ಎರಡೂ ಕಡೆಯವರು ಪರಸ್ಪರ ದೂರು ಸಲ್ಲಿಸಿದ್ದಾರೆ’ ಎಂದು ಹೇಳಿದ್ದಾರೆ.

ಯೋಧನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೆಲವರು ಇದು ಡಿಎಂಕೆ ಕಾರ್ಯಕರ್ತರ ಗೂಂಡಾಗಿರಿ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಯೊಧನ ಪತ್ನಿಯ ಮೇಲೆ ಹಲ್ಲೆ ಮಾಡಿರುವುದು ತೀವ್ರ ಖಂಡನೀಯ. ನಾನು, ನಮ್ಮ ಕಾರ್ಯಕರ್ತರು ಸ್ಥಳಕ್ಕೆ ತೆರಳಲಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.