ಶ್ರೀನಗರ: ಕುಪ್ವಾರ ಜಿಲ್ಲೆಯ ಟ್ಯಾಂಗ್‌ದರ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಪಾಕಿಸ್ತಾನದ ಸೈನಿಕರು ಮರೆಯಲ್ಲಿ ನಿಂತು ಮಂಗಳವಾರ ಬೆಳಿಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಯೋಧನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲ್‌ಒಸಿ ಸಮೀಪದ ಸೇನಾ ಶಿಬಿರಗಳ ಮೇಲೆ ಪಾಕಿಸ್ತಾನದ ಸೈನಿಕರು ಹಲವು ಬಾರಿ ಗುಂಡಿನ ದಾಳಿ ನಡೆಸಿದರು. ಇದರಲ್ಲಿ ಗಾಯಗೊಂಡಿರುವ ಯೋಧ ಕೌಶಾಲ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದು, ಗುಂಡಿನ ಚಕಮಕಿ ಮುಂದುವರಿದಿದೆ. ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, ಮರೆಯಲ್ಲಿ ನಿಂತು ದಾಳಿ ನಡೆಸುವುದು ಹಾಗೂ ಒಳನುಸುಳುವುದು ಕಳೆದ ಎರಡು ವರ್ಷಗಳಿಂದ ಹೆಚ್ಚಾಗಿದೆ.
ಎರಡೂ ರಾಷ್ಟ್ರಗಳು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸೇನಾ ಕಾರ್ಯಾಚರಣೆ ಮಹಾನಿರ್ದೇಶಕರೊಂದಿಗೆ ಕದನ ವಿರಾಮ ಉಲ್ಲಂಘನೆ ಕುರಿತು ಪಾಕಿಸ್ತಾನ ಮಾತುಕತೆ ನಡೆಸಿತ್ತು. ಒಳನುಸುಳುವಿಕೆ ಕುರಿತು ಎಲ್‌ಒಸಿ ಬಳಿ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಹಾಗೂ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ, ಕದನ ವಿರಾಮ ಉಲ್ಲಂಘನೆ ಹಾಗೂ ಮರೆಯಲ್ಲಿ ನಿಂತು ದಾಳಿ ನಡೆಸುವುದನ್ನು ಅದು ಮುಂದುವರಿಸಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.