ADVERTISEMENT

ಕುಪ್ವಾರ: ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಹುತಾತ್ಮ, ನಾಲ್ವರಿಗೆ ಗಾಯ

ಪಿಟಿಐ
Published 27 ಜುಲೈ 2024, 6:02 IST
Last Updated 27 ಜುಲೈ 2024, 6:02 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ/ ಶ್ರೀನಗರ: ಜಮ್ಮು–ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪಾಕಿಸ್ತಾನದ ಗಡಿ ಕಾರ್ಯಪಡೆಯ (ಬಿಎಟಿ) ದಾಳಿಯಲ್ಲಿ ಭಾರತದ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಕ್ಯಾಪ್ಟನ್ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. 

ಪಾಕಿಸ್ತಾನದ ಒಬ್ಬ ನುಸುಳುಕೋರನನ್ನು ಹತ್ಯೆ ಮಾಡಲಾಗಿದೆ.

ADVERTISEMENT

ಕುಪ್ವಾರ ಜಿಲ್ಲೆಯ ಕಮ್ಕಾರಿ ಸೆಕ್ಟರ್‌ನಲ್ಲಿ ಶನಿವಾರ ಬೆಳಿಗ್ಗೆ ಬಿಎಟಿಯ ಮೂವರು ನುಸುಳುಕೋರರ ತಂಡವು ಭಾರತದ ಗಡಿಯನ್ನು ನುಸುಳಲು ಯತ್ನಿಸಿದೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನಾ ಪಡೆಯು, ಗುಂಡಿನ ದಾಳಿ ನಡೆಸಿದ್ದು, ಉಗ್ರರು ಸಹ ಸೇನಾ ಯೋಧರನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ಮತ್ತು ಗುಂಡಿನ ಸುರಿಮಳೆಗೆರೆದಿದ್ದಾರೆ. ನುಸುಳುಕೋರರು ಮತ್ತು ಸೇನಾ ಯೋಧರ ಮಧ್ಯೆ ಗುಂಡಿನ ದಾಳಿ ತೀವ್ರಗೊಳ್ಳುತ್ತಿದ್ದಂತೆ ಇಬ್ಬರು ನುಸುಳುಕೋರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದತ್ತ ಪರಾರಿಯಾದರು ಎಂದು ಮೂಲಗಳು ತಿಳಿಸಿವೆ. 

ನುಸುಳುಕೋರರು ಮತ್ತು ಭಾರತದ ಸೇನೆ ನಡುವಿನ ಗುಂಡಿನ ದಾಳಿಯಲ್ಲಿ ಭಾರತದ ಐವರು ಯೋಧರು ಗಾಯಗೊಂಡರು. ಅವರಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಮತ್ತೊಂದೆಡೆ ಗಾಯಗೊಂಡ ಕ್ಯಾಪ್ಟನ್ ಸೇರಿದಂತೆ ಇತರ ನಾಲ್ವರು ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಏನಿದು ಬಿಎಟಿ?: ಪಾಕಿಸ್ತಾನದ ವಿಶೇಷ ಸೇವೆಗಳ ಗುಂಪು (ಎಸ್ಎಸ್‌ಜಿ) ಲಷ್ಕರ್‌–ಎ–ತಯಬಾ, ಹಿಜ್ಬುಲ್–ಮುಜಾಹಿದೀನ್ ಹಾಗೂ ಜೈಷ್–ಎ–ಮೊಹಮ್ಮದ್ ಸಂಘಟನೆಗಳ ಉಗ್ರರನ್ನು ಬಿಎಟಿ ಒಳಗೊಂಡಿದೆ ಎಂದು ಭದ್ರತಾ ತಜ್ಞರು ತಿಳಿಸಿದ್ದಾರೆ. 

ಪಾಕಿಸ್ತಾನ ಸೇನೆಯ ಆರರಿಂದ ಏಳು ಯೋಧರು ಹಾಗೂ ಕೆಲವು ಭಯೋತ್ಪಾದಕರನ್ನು ಒಳಗೊಂಡ ಬಿಎಟಿ ತಂಡವು ಅಂತರರಾಷ್ಟ್ರೀಯ ಗಡಿಯಲ್ಲಿ ವ್ಯವಸ್ಥಿತವಾಗಿ ನುಸುಳುತ್ತದೆ. ಆ ಬಳಿಕ ಅಂತರರಾಷ್ಟ್ರೀಯ ಗಡಿ ರೇಖೆಯ 778 ಕಿ.ಮೀ ವ್ಯಾಪ್ತಿಯಲ್ಲಿ ಭಾರತ ಸೇನಾ ಚಟುವಟಿಕೆಗಳು, ಸೇನಾ ನಿಯೋಜನೆ ಸೇರಿದಂತೆ ಇನ್ನಿತರ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡುತ್ತದೆ ಎಂದು ತಿಳಿದುಬಂದಿದೆ. 

‘ಜಮ್ಮುಗೆ 2 ಬಿಎಸ್ಎಫ್ ಬೆಟಾಲಿಯನ್’

ನವದೆಹಲಿ: ಒಡಿಶಾದಿಂದ ಬಿಎಸ್‌ಎಫ್‌ನ ಎರಡು ತುಕಡಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ರವಾನಿಸಲು ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.  

ಜಮ್ಮು–ಕಾಶ್ಮೀರದಲ್ಲಿನ ಭಾರತ–ಪಾಕಿಸ್ತಾನದ ಗಡಿಯಲ್ಲಿ ಭಯೋತ್ಪಾದಕರ ಅಟ್ಟಹಾಸ ಹಾಗೂ ನುಸುಳುವಿಕೆ ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಡಿಶಾದಲ್ಲಿ ನಕ್ಸಲರ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಬಿಎಸ್ಎಫ್‌ನ ಈ ಎರಡು ತುಕಡಿಗಳಲ್ಲಿ  ತುಕಡಿಗಳಲ್ಲಿ 2000ಕ್ಕೂ ಹೆಚ್ಚು ಯೋಧರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.