ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯು ಘನತ್ಯಾಜ್ಯ ನಿರ್ವಹಣಾ ನಿಯಮಗಳು–2016ರ ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ವೇಳೆ, ದೆಹಲಿ ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಿತ ಎಲ್ಲ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸುವಂತೆ ದೆಹಲಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದೆ.
ಮುಖ್ಯ ಕಾರ್ಯದರ್ಶಿ ಅವರಿಗೆ ಯಾವುದೇ ಅಧಿಕಾರಿ ಸಹಕಾರ ನೀಡದಿರುವುದು ಕಂಡುಬಂದಲ್ಲಿ, ಆ ಅಧಿಕಾರಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎಂದು ತಿಳಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನು ಒಳಗೊಂಡ ನ್ಯಾಯಪೀಠವು, ‘2016ರ ನಿಯಮಗಳು ಕೇವಲ ಕಾಗದ ಪತ್ರದಲ್ಲಿ ಅಷ್ಟೇ ಇರುವುದನ್ನು ಗಮನಿಸಿದ್ದೇವೆ. ರಾಷ್ಟ್ರ ರಾಜಧಾನಿ ದೆಹಲಿಯೇ 2016ರ ನಿಯಮ ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದ್ದರೆ, ದೇಶದ ಬೇರೆ ಭಾಗಗಳ ಕತೆ ಏನು’ ಎಂದು ಪ್ರಶ್ನಿಸಿದೆ.
ನಿಯಮ ಅನುಷ್ಠಾನವಾಗದ ಕಾರಣ, ಒಂದು ಕಡೆಯಲ್ಲಿ ಘನ ತ್ಯಾಜ್ಯವನ್ನು ಕಸ ಸುರಿಯುವ ಜಾಗದಲ್ಲಿ ಅಕ್ರಮವಾಗಿ ಬಿಸಾಡಲಾಗುತ್ತಿದೆ ಮತ್ತು ನಂತರ ಅದಕ್ಕೆ ಬೆಂಕಿ ಹಾಕಲಾಗುತ್ತಿದೆ. ಇನ್ನೊಂದೆಡೆ ಭಾರಿ ಪ್ರಮಾಣದ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ದಿನೇ ದಿನೇ ತ್ಯಾಜ್ಯ ಹೆಚ್ಚುತ್ತಿದೆ. ರಾಜಧಾನಿಯಲ್ಲಿ ನಿತ್ಯದ ಘನ ತ್ಯಾಜ್ಯ ಪ್ರಮಾಣ ಎಷ್ಟು ಎಂದು ದೆಹಲಿ ಸರ್ಕಾರವು ವರದಿಯಲ್ಲಿ ತಿಳಿಸಬೇಕು ಎಂದು ಹೇಳಿದೆ.
ಅರ್ಜಿ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.