ADVERTISEMENT

ಬಿಜೆಪಿಯ ಕೆಲ ಶಾಸಕರು ಪವಾರ್‌ ಬಣ ಸೇರಲು ಉತ್ಸುಕ: ಅನಿಲ್‌ ದೇಶ್‌ಮುಖ್‌

ಪಿಟಿಐ
Published 18 ಜುಲೈ 2024, 11:37 IST
Last Updated 18 ಜುಲೈ 2024, 11:37 IST
ಅನಿಲ್‌ ದೇಶ್‌ಮುಖ್–ಪಿಟಿಐ ಚಿತ್ರ
ಅನಿಲ್‌ ದೇಶ್‌ಮುಖ್–ಪಿಟಿಐ ಚಿತ್ರ   

ನಾಗ್ಪುರ: ‘ಬಿಜೆಪಿಯ ಕೆಲವು ಶಾಸಕರು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೇರಲು ಉತ್ಸುಕರಾಗಿದ್ದಾರೆ’ ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಗುರುವಾರ ತಿಳಿಸಿದ್ದಾರೆ.

ಅಜಿತ್‌ ಪವಾರ್‌ ಬಣದ ಪಿಂಪ್ರಿ– ಚಿಂಚವಾಡ್‌ ಘಟಕದ ಅಧ್ಯಕ್ಷ ಅಜಿತ್‌ ಗವ್ಹಾಣೆ, ಇಬ್ಬರು ಮಾಜಿ  ಕಾರ್ಪೊರೇಟರ್‌ಗಳು ಬುಧವಾರ ಶರದ್‌ ಪವಾರ್‌ ಬಣಕ್ಕೆ ಸೇರ್ಪಡೆಯಾಗಿದ್ದರು. ‘ಶರದ್‌ ಪವಾರ್‌ ಆಶೀರ್ವಾದ ಪಡೆಯುವ ಉದ್ದೇಶದಿಂದ ಮತ್ತೆ ಅವರ ಬಣಕ್ಕೆ ಸೇರಿದ್ದೇನೆ’ ಎಂದು ಗವ್ಹಾಣೆ ತಿಳಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ, ದೇಶ್‌ಮುಖ್‌ ಅವರು ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. 

‘ರಾಜ್ಯದ ಆಡಳಿತ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ಶಾಸಕರು ಹಾಗೂ ಮುಖಂಡರು ಪಕ್ಷ ಸೇರ್ಪಡೆಯಾಗಲು ಬಯಸಿದ್ದಾರೆ. ಎನ್‌ಸಿಪಿ (ಅಜಿತ್‌ ಪವಾರ್‌ ಬಣ)ದ ಶಾಸಕರು ಸೇರಲು ಬಯಸಿದ್ದು, ಈ ಕುರಿತಂತೆ ಶರದ್‌ ಪವಾರ್‌ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದರು. 

ADVERTISEMENT

ಸೇರ್ಪಡೆಯಾಗುವವರಲ್ಲಿ ಅಜಿತ್‌ ಪವಾರ್‌ ಕೂಡ ಸೇರಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಈಗಾಗಲೇ ಸ್ವಂತ ಪಕ್ಷ ಕಟ್ಟಿದ್ದು, ಮತ್ತಷ್ಟು ವಿಸ್ತರಿಸಲು ಬಯಸಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಯಾರೇ ಮುಖಂಡರು ಪಕ್ಷ ಸೇರ್ಪಡೆಯಾಗಲು ಬಯಸಿದರೆ, ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಶರದ್‌ ಪವಾರ್‌ ಬುಧವಾರ ಹೇಳಿಕೆ ನೀಡಿದ್ದರು. ಅಜಿತ್‌ ಪವಾರ್‌ ಬಂದರೆ ಸೇರ್ಪಡೆಗೊಳಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.