ಬೆಂಗಳೂರು: ಕೆಲವು ನಿರ್ಧಾರಗಳು ಇಂದು ಕಹಿಯಾಗಿ ಕಾಣಬಹುದು, ಆದರೆ, ಮುಂದಿನ ದಿನಗಳಲ್ಲಿ ಅವುಗಳು ಫಲ ಕೊಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಹಲವೆಡೆ ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮೋದಿ ಅವರ ಹೇಳಿಕೆ ಮಹತ್ವ ಪಡೆದಿದೆ.
ಬೆಂಗಳೂರಿನಲ್ಲಿ ಕೆಲ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿರುವ ಅವರು,‘ನಮ್ಮ ಕೆಲವು ನಿರ್ಧಾರಗಳು ಸದ್ಯಕ್ಕೆ ಕಹಿ ಎಂದು ಕಾಣಬಹುದು, ಮುಂಬರುವ ದಿನಗಳಲ್ಲಿ ಅವುಗಳು ಫಲ ನೀಡಲಿವೆ’ ಎಂದು ಹೇಳಿದ್ಧಾರೆ.
ಸಾರ್ವಜನಿಕ ವಲಯದಷ್ಟೇ ಖಾಸಗಿ ವಲಯವೂ ಮುಖ್ಯವಾಗಿದೆ. ಎರಡೂ ಕಡೆ ಸಮಾನ ಅವಕಾಶಗಳಿವೆ. ಆದರೆ, ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಖಾಸಗಿ ಕಂಪನಿಗಳ ಬಗ್ಗೆ ಜನರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರು.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಬೆಂಗಳೂರಿನ ಯುವ ವೃತ್ತಿಪರರು ವಿಶ್ವದಾದ್ಯಂತ ಸುಗಮ ವಹಿವಾಟಿಗೆ ಶ್ರಮಿಸಿದ್ದಾರೆ. ಸರ್ಕಾರದ ಮಧ್ಯಪ್ರವೇಶವಿಲ್ಲದಿದ್ದರೂ ದೇಶವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು ಎಂಬುದನ್ನು ತೋರಿಸಿದ್ದಾರೆ.
‘ಸಂಪತ್ತು ಮತ್ತು ಉದ್ಯೋಗಗಳನ್ನು ಸೃಷ್ಟಿಸುವವರೇ ನಮ್ಮ ಬಲ. ಯುನಿಕಾರ್ನ್‌ಗಳಿಂದ ಸೃಷ್ಟಿಯಾಗಿರುವ ಸಂಪತ್ತು ₹ 12 ಲಕ್ಷ ಕೋಟಿಯಾಗಿದೆ. ಈ ಮೊದಲು 800 ದಿನಗಳಲ್ಲಿ 10,000 ಯುನಿಕಾರ್ನ್‌ಗಳು ಹೊರಹೊಮ್ಮುತ್ತಿದ್ದವು. ಆದರೆ, ಈಗ 200 ದಿನಗಳಲ್ಲಿ 10,000 ಯುನಿಕಾರ್ನ್‌ಗಳು ರೂಪುಗೊಳ್ಳುತ್ತಿವೆ. ಬೆಂಗಳೂರು ‘ಏಕ್ ಭಾರತ್, ಶ್ರೇಷ್ಠ ಭಾರತ್' ಮನೋಭಾವದ ಪ್ರತಿಬಿಂಬವಾಗಿದೆ. ಬೆಂಗಳೂರಿನ ಅಭಿವೃದ್ಧಿಯು ಲಕ್ಷಾಂತರ ಕನಸುಗಳ ಅಭಿವೃದ್ಧಿಯಾಗಿದೆ. ತಮ್ಮ ಕನಸುಗಳನ್ನು ನನಸಾಗಿಸಲು ಬಯಸುವ ದೇಶದ ಲಕ್ಷಾಂತರ ಯುವಕರಿಗೆ ಬೆಂಗಳೂರು ಕನಸಿನ ಸ್ಥಳವಾಗಿ ಹೊರಹೊಮ್ಮಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.