ADVERTISEMENT

ಕಾಶ್ಮಿರ | ಉಗ್ರರ ದಾಳಿ: ವೈದ್ಯ, ಕಾರ್ಮಿಕರು ಸೇರಿ 6 ಮಂದಿ ಸಾವು

ಪಿಟಿಐ
Published 21 ಅಕ್ಟೋಬರ್ 2024, 2:37 IST
Last Updated 21 ಅಕ್ಟೋಬರ್ 2024, 2:37 IST
   

ಶ್ರೀನಗರ: ಕಾಶ್ಮೀರದ ಗಾಂದರಬಲ್‌ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಕಾರ್ಮಿಕರು, ಒಬ್ಬ ವೈದ್ಯ ಸೇರಿ 6 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಗುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಸಮೀಪ ಭಾನುವಾರ ಸಂಜೆ ಈ ದಾಳಿ ನಡೆದಿದೆ.

ನಿರ್ಮಾಣ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯು ಕಾರ್ಮಿಕರ ವಾಸಕ್ಕೆ ನಿರ್ಮಿಸಿರುವ ಮನೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಘಟನಾ ಸ್ಥಳವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಉಗ್ರರಿಗಾಗಿ ಉನ್ನತ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಉಗ್ರರ ದಾಳಿಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದೊಂದು ಹೇಯ ಕೃತ್ಯ. ಇದರಲ್ಲಿ ಭಾಗಿಯಾಗಿರುವವರಿಗೆ ತಕ್ಕ ಪಾಠ ಕಲಿಸುತ್ತೇವೆ. ನಾಗರಿಕರ ಮೇಲೆ ನಡೆದ ಭೀಕರ ಉಗ್ರರ ದಾಳಿಯು ಹೇಡಿತನವಾಗಿದೆ‘ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನಾಗರಿಕರ ಮೇಲಿನ ಭೀಕರ ಉಗ್ರರ ದಾಳಿಯನ್ನು ಖಂಡಿಸಿದ್ದು, ಈ ಕೃತ್ಯದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲಿದೆ ಎಂದು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕ ನಾಯಕರು ದಾಳಿಯನ್ನು ಖಂಡಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.