ADVERTISEMENT

ಮುಂದುವರಿದ ವೈದ್ಯರ ಪ್ರತಿಭಟನೆ: ಸಿಗದ ಚಿಕಿತ್ಸೆ, ರೋಗಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 16:01 IST
Last Updated 13 ಆಗಸ್ಟ್ 2024, 16:01 IST
   

ನವದೆಹಲಿ: ಕೋಲ್ಕತ್ತದಲ್ಲಿ ನಡೆದಿರುವ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ದೇಶದಾದ್ಯಂತ ವೈದ್ಯರಿಂದ ವ್ಯಾಪಕ ಖಂಡನೆ, ಆಕ್ರೋಶ ವ್ತಕ್ತವಾಗುತ್ತಿದ್ದು, ಎರಡನೇ ದಿನವಾದ ಮಂಗಳವಾರ ಕೂಡ ವೈದ್ಯರ ಪ್ರತಿಭಟನೆ ದೇಶವ್ಯಾಪಿ ಮುಂದುವರಿದಿದೆ. 

ವೈದ್ಯರ ಪ್ರತಿಭಟನೆಯಿಂದಾಗಿ ಆಸ್ಪತ್ರೆಗಳಲ್ಲಿ ಸೇವೆಗಳು ಸ್ತಬ್ಧಗೊಂಡಿದ್ದು, ಚಿಕಿತ್ಸೆ ನೀಡದೆ ವಾಪಸ್‌ ಕಳುಹಿಸುತ್ತಿದ್ದಾರೆ ಎಂದು ಕೆಲವು ರೋಗಿಗಳು ದೂರಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಎಐಐಎಂಎಸ್‌ನಲ್ಲಿ ವೈದ್ಯರ ಮುಷ್ಕರ ಮುಂದುವರಿದಿದೆ. ಈ ಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಅಪಾಯಿಂಟ್‌ಮೆಂಟ್ ಇಲ್ಲದೇ ದೂರದ ಸ್ಥಳಗಳಿಂದ ಆಸ್ಪತ್ರೆಗೆ ಬಂದವರನ್ನು ವಾಪಸ್‌ ಕಳುಹಿಸಲಾಯಿತು.

ADVERTISEMENT

ಸುಮಾರು ಒಂದು ಸಾವಿರ ಸ್ಥಾನಿಕ ವೈದ್ಯರು ‘ಸುರಕ್ಷತೆ ಇಲ್ಲದ ಕಡೆ, ಕರ್ತವ್ಯ ನಿರ್ವಹಿಸಲ್ಲ’ ಮತ್ತು ‘ಸಂತ್ರಸ್ತರಿಗೆ ನ್ಯಾಯ ಬೇಕು’ ಎಂಬ ಸಂದೇಶದ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಆಸ್ಪತ್ರೆಯ ಆವರಣದಲ್ಲಿ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು.

ಕಳೆದ ಗುರುವಾರ ಕೋಲ್ಕತ್ತದ ಆರ್‌.ಜಿ. ಕರ್ ವೈದ್ಯ ಕಾಲೇಜಿನಲ್ಲಿ ಕರ್ತವ್ಯ ನಿರತ 32 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದನ್ನು ಖಂಡಿಸಿ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಕರೆ ನೀಡಿರುವ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರದ ಭಾಗವಾಗಿ ಈ ಪ್ರತಿಭಟನೆ ನಡೆಯುತ್ತಿದೆ. 

ಉತ್ತರ ಪ್ರದೇಶದಾದ್ಯಂತ ವೈದ್ಯರು ಕೆಲಸ ಸ್ಥಗಿತಗೊಳಿಸಿ, ಮುಷ್ಕರ ನಡೆಸಿದರು. ಲಖನೌದ  ಕೆ.ಜಿ. ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು), ಸಂಜಯ್ ಗಾಂಧಿ ಪೋಸ್ಟ್ ಗ್ರಾಜ್ಯುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವೈದ್ಯರು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದರು. ವೈದ್ಯರ ಸುರಕ್ಷತೆಯ ಖಾತ್ರಿಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಗರ್ಲ್ಸ್‌ ಹಾಸ್ಟೆಲ್‌ಗಳ ಬಳಿ ಸೂಕ್ತ ಭದ್ರತೆ, ವಾರ್ಡ್‌ಗಳಲ್ಲಿ ಸಿ.ಸಿ.ಟಿ.ವಿ ಅಳವಡಿಕೆ, ಮಹಿಳಾ ವೈದ್ಯರ ಕ್ಯಾಬಿನ್‌ಗೆ ಪುರುಷರ ಪ್ರವೇಶ ನಿಷೇಧ ಸೇರಿ ಐದು ಅಂಶಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕೆಜಿಎಂಯು ಸ್ಥಾನಿಕ ವೈದ್ಯರು ಎಚ್ಚರಿಸಿದರು.

ವಾರಾಣಸಿ, ಪ್ರಯಾಗರಾಜ್, ಝಾನ್ಸಿ, ಕಾನ್ಪುರ, ಆಗ್ರಾ, ಮೀರಠ್‌ ಸೇರಿ ವಿವಿಧೆಡೆ ವೈದ್ಯರು ಪ್ರತಿಭಟನೆ ನಡೆಸಿರುವುದು ವರದಿಯಾಗಿದೆ.

ಕೇರಳದಲ್ಲೂ ವೈದ್ಯರು ಮತ್ತು ಪಿ.ಜಿ ವೈದ್ಯ ವಿದ್ಯಾರ್ಥಿಗಳ ವಿವಿಧ ವೇದಿಕೆಗಳು ಪ್ರತಿಭಟನೆ ನಡೆಸಿವೆ. ಕೇರಳ ಸ್ನಾತಕೋತ್ತರ ವೈದ್ಯ ಪದವೀಧರರ ಸಂಘವು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲಿ ತಕ್ಷಣವೇ ಭದ್ರತೆಯ ಪರಿಶೀಲನೆ ನಡೆಸುವಂತೆ ಆಗ್ರಹಿಸಿದೆ.

ಅಗರ್ತಲಾ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ವಿದ್ಯಾರ್ಥಿಗಳು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟಿಸಿದರು. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯಲ್ಲಿ ವೈದ್ಯಕೀಯ ಸೇವೆಗಳು ಭಾಗಶಃ ಸ್ಥಗಿತಗೊಂಡಿದ್ದವು.

ರಾಂಚಿಯ ಸರ್ಕಾರಿ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ರಿಮ್ಸ್‌) ಕಿರಿಯ ವೈದ್ಯರು ಹೊರರೋಗಿಗಳ ವಿಭಾಗಗಳ ಸೇವೆಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಬಹಿಷ್ಕರಿಸಿದರು.

ಜೈಪುರದಲ್ಲಿ, ಸವಾಯಿ ಮಾನ್ ಸಿಂಗ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಸ್ಥಾನಿಕ ವೈದ್ಯರು ಮುಷ್ಕರದಲ್ಲಿ ಭಾಗವಹಿಸಿರುವುದರಿಂದ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ ಬೀರಿತು. ಮಹಾರಾಷ್ಟ್ರದಲ್ಲೂ ಸ್ಥಾನಿಕ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.