ಪಣಜಿ: ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪ ಹೊತ್ತಿರುವ ಸೋನಾಲಿ ಅವರ ಇಬ್ಬರು ಆಪ್ತರು ತನಿಖೆ ವೇಳೆ ನೀಡಿರುವ ಮಾಹಿತಿಯನ್ನು ಆಧರಿಸಿ ಮತ್ತಿಬ್ಬರನ್ನು ಬಂಧಿಸಲಾಗಿದೆ.
ಉತ್ತರ ಗೋವಾದ ರೆಸ್ಟೊರೆಂಟ್ ಒಂದರ ಮಾಲೀಕ ಮತ್ತು ಕೊಲೆ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಒದಗಿಸುತ್ತಿದ್ದ ಆರೋಪ ಹೊತ್ತ ಶಂಕಿತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶಂಕಿತ ಡ್ರಗ್ ಸಾಗಣೆದಾರ ದತ್ತಪ್ರಸಾದ್ ಗಾಂವ್ಕರ್‌ನನ್ನು ಅಂಜುನಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಈತನಿಂದ ಡ್ರಗ್ ತೆಗೆದುಕೊಳ್ಳುತ್ತಿದ್ದೆವು ಎಂದು ಬಂಧಿತ ಕೊಲೆ ಆರೋಪಿಗಳು ಬಾಯ್ಬಿಟ್ಟ ಬೆನ್ನಲ್ಲೇ ಗೋವಾ ಪೊಲೀಸರು ದತ್ತಪ್ರಸಾದ್‌ನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಸೋನಾಲಿ ಅವರು ಮೃತಪಡುವ ಮುನ್ನ ಆಗಸ್ಟ್ 22ರಂದು ತಡರಾತ್ರಿ ವರೆಗೆ ಪಾರ್ಟಿ ಮಾಡಿದ ಕರ್ಲೀಸ್ ರೆಸ್ಟೊರೆಂಟ್‌ನ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ. ಸೋನಾಲಿ ಅವರ ಕೊಲೆಗೆ ಹಣಕಾಸಿನ ವ್ಯವಹಾರ ಕಾರಣವಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ವಿವರಿಸಿದ್ದಾರೆ.
ಫೋಗಾಟ್ ಅವರ ಆಪ್ತರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಕುಡಿಯುವ ನೀರಿನ ಬಾಟಲಿಯಲ್ಲಿ ಉದ್ದೇಶಪೂರ್ವಕವಾಗಿ ವಿಷದ ದ್ರವ ಬೆರೆಸಿ, ಅದನ್ನು ಆಕೆಗೆ ಕುಡಿಸಿ ಕೊಂದಿದ್ದಾರೆ. ಕೊಲೆ ಮಾಡಿರುವುದನ್ನು ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.