ADVERTISEMENT

ಸೊನಾಲಿ ಫೋಗಟ್‌ಗೆ ಕುಡಿಸಿದ್ದು ‘ಮೆಥಾಂಫೆಟಮೈನ್‌’: ಪೊಲೀಸರ ಮಾಹಿತಿ

ಪಿಟಿಐ
Published 27 ಆಗಸ್ಟ್ 2022, 15:23 IST
Last Updated 27 ಆಗಸ್ಟ್ 2022, 15:23 IST
ಸೊನಾಲಿ ಫೋಗಟ್‌
ಸೊನಾಲಿ ಫೋಗಟ್‌    

ಪಣಜಿ: ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅವರಿಗೆ ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ‘ಮೆಥಾಂಫೆಟಮೈನ್’ ಎಂಬ ಡ್ರಗ್ಸ್ ನೀಡಿದ್ದರು ಎಂದು ಗೋವಾ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅಂಜುನಾದಲ್ಲಿರುವ ‘ಕರ್ಲೀಸ್ ರೆಸ್ಟೊರೆಂಟ್‌’ನಲ್ಲಿ ಸೊನಾಲಿ ಫೋಗಟ್‌ ಅವರಿಗೆ ಪಾನೀಯದಲ್ಲಿ ಡ್ರಗ್ಸ್‌ ಬೆರಸಿ ನೀಡಲಾಗಿತ್ತು. ಉಳಿದ ಭಾಗವು ರೆಸ್ಟೋರೆಂಟ್‌ನ ಶೌಚಾಲಯದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಜಿವ್ಬಾ ದಳವಿ ತಿಳಿಸಿದ್ದಾರೆ.

ಸೊನಾಲಿ ಫೋಗಟ್‌ ಅವರ ಹತ್ಯೆ ಪ್ರಕರಣದಲ್ಲಿ ಆಕೆಯ ಆಪ್ತ ಸಹಾಯಕ ಸುಧೀರ್ ಸಂಗ್ವಾನ್, ಮತ್ತೋರ್ವ ಸಹಾಯಕ ಸುಖ್ವಿಂದರ್ ಸೇರಿದಂತೆ ಒಟ್ಟು ನಾಲ್ವರನ್ನು ಗೋವಾ ಪೊಲೀಸರು ಈ ವರೆಗೆ ಬಂಧಿಸಿದ್ದಾರೆ. ಕರ್ಲೀಸ್ ರೆಸ್ಟೋರೆಂಟ್ ಮಾಲೀಕ ಎಡ್ವಿನ್ ನ್ಯೂನ್ಸ್ ಮತ್ತು ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಎಂಬಾತನನ್ನು ಶನಿವಾರ ಬಂಧಿಸಲಾಗಿತ್ತು.

ಸುಖ್ವಿಂದರ್‌ ಮತ್ತು ಸಂಗ್ವಾನ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ನೂನ್ಸ್ ಮತ್ತು ಗಾಂವ್ಕರ್ ವಿರುದ್ಧ ಮಾದಕ ದ್ರವ್ಯ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫೋಗಟ್ ಮತ್ತು ಇತರರು ತಂಗಿದ್ದ ಅಂಜುನಾದ ಹೋಟೆಲ್ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಗಾಂವ್ಕರ್ ಎಂಬಾತ ಸಂಗ್ವಾನ್ ಮತ್ತು ಸುಖ್ವಿಂದರ್‌ಗೆ ಡ್ರಗ್ಸ್‌ ಸರಬರಾಜು ಮಾಡಿದ್ದ.

ಫೋಗಟ್ ಅವರು ಆಗಸ್ಟ್ 23 ರಂದು ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ಸಾವಿಗೀಡಾಗಿರುವುದಾಗಿ ಮೊದಲಿಗೆ ಹೇಳಲಾಗಿತ್ತು. ಅದರೆ, ಅವರ ಮರಣೋತ್ತರ ಪರೀಕ್ಷೆ ವರದಿ ಗುರುವಾರ ಬಹಿರಂಗವಾಗಿದ್ದು, ಅವರ ದೇಹದ ಮೇಲೆ ಗಾಯಗಳಾಗಿರುವುದು ತಿಳಿದುಬಂದಿತ್ತು. ಹೀಗಾಗಿ ನಟಿ ಕೊಲೆಯಾಗಿರುವುದು ಖಚಿತವಾಗಿತ್ತು.

ಪ್ರಕರಣ ಸಂಬಂಧ ಗೋವಾ ಪೊಲೀಸರು ಸುಧೀರ್ ಸಂಗ್ವಾನ್ ಹಾಗೂ ಸುಖ್ವಿಂದರ್ ವಾಸಿ ಎಂಬುವರನ್ನು ಆರೋಪಿಗಳೆಂದು ಪರಿಗಣಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ಇಬ್ಬರೂ, ನಟಿಯೊಂದಿಗೆ ಗೋವಾಕ್ಕೆ ಆಗಮಿಸಿದ್ದರು.

ಸೊನಾಲಿ ಅವರು 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್‌ ಜಿಲ್ಲೆಯ ಆದಂಪುರ ಕ್ಷೇತ್ರದಿಂದ ಕುಲ್‌ದೀಪ್‌ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಚುನಾವಣಾ ಕಣದಲ್ಲಿ ಭಾರಿ ಸದ್ದು ಮಾಡಿದ್ದರು.

ಟಿಕ್ ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೊನಾಲಿ ಫೋಗಟ್‌, 14ನೇ ಆವೃತ್ತಿಯ ‘ಬಿಗ್‌ಬಾಸ್’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದರು.

ಇನ್ನೊಂದೆಡೆ, ಸೊನಾಲಿ ಫೋಗಟ್‌ಗೆ ಅವರ ಆಪ್ತ ಸಹಾಯಕ ರೆಸ್ಟೋರೆಂಟ್‌ನಲ್ಲಿ ಪಾನಿಯವನ್ನು ಕುಡಿಸುತ್ತಿರುವ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.