ನವದೆಹಲಿ: ಬಿಜೆಪಿ ವಿಭಜಿಸುವ ರಾಜಕಾರಣ ಮಾಡುತ್ತಿದೆ ಮತ್ತು ವಿರೋಧ ಪಕ್ಷಗಳನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷ ಮತ್ತು ಅದರ ನಾಯಕರ ಒಡೆಯುವ ಮತ್ತು ಧ್ರುವೀಕರಣದ ಅಜೆಂಡಾ ಈಗ ರಾಜ್ಯಗಳಲ್ಲಿ ರಾಜಕೀಯ ಚರ್ಚೆಯ ಸಾಮಾನ್ಯ ವಿಚಾರವಾಗಿದೆ ಎಂದಿದ್ದಾರೆ.
ಇತಿಹಾಸವನ್ನು ಮಾತ್ರವಲ್ಲ ಸಮಕಾಲೀನ ಸತ್ಯಗಳನ್ನು ತಿರುಚಲಾಗುತ್ತಿದೆ ಮತ್ತು ಇದನ್ನು ಅಜೆಂಡಾವನ್ನು ಪ್ರಚಾರ ಮಾಡಲು ಬಳಸಿಕೊಳ್ಳಲಾಗುತ್ತಿದೆ. 'ದ್ವೇಷ ಮತ್ತು ಪೂರ್ವಾಗ್ರಹ'ದ ಈ ಶಕ್ತಿಗಳನ್ನು ಎದುರಿಸಲು ಪ್ರತಿಯೊಬ್ಬರೂ ನಿಲ್ಲಬೇಕು. ಶತಮಾನಗಳಿಂದ ನಮ್ಮ ವೈವಿಧ್ಯಮಯ ಸಮಾಜವನ್ನು ಉಳಿಸಿ ಮತ್ತು ಶ್ರೀಮಂತಗೊಳಿಸಿದ ಸೌಹಾರ್ದತೆ ಮತ್ತು ಸಾಮರಸ್ಯದ ಬಂಧಗಳನ್ನು ಹಾನಿಗೊಳಿಸಲು ನಾವು ಅವರಿಗೆ ಅವಕಾಶ ನೀಡಬಾರದು' ಎಂದು ಅವರು ಹೇಳಿದರು.
ಆಡಳಿತ ಪಕ್ಷವು ಪ್ರತಿಪಕ್ಷಗಳು, ಅದರ ನಾಯಕರು ಮತ್ತು ಕಾರ್ಯಕರ್ತರನ್ನು ನಿರಂತರವಾಗಿ ಗುರಿಯಾಗಿಸುತ್ತಿದೆ. ರಾಜ್ಯಾಂಗದ ಸಂಪೂರ್ಣ ಶಕ್ತಿಯನ್ನು ಅವರ ವಿರುದ್ಧ ಪ್ರಯೋಗಿಸಲಾಗುತ್ತಿದೆ. ಅಧಿಕಾರದಲ್ಲಿರುವವರಿಗೆ ಗರಿಷ್ಠ ಆಡಳಿತ ಎಂದರೆ ಗರಿಷ್ಠ ಭಯ ಮತ್ತು ಬೆದರಿಕೆಯನ್ನು ಹರಡುವುದು ಎಂದರ್ಥ. ಇಂತಹ ಅಬ್ಬರದ ಬೆದರಿಕೆಗಳು ಮತ್ತು ತಂತ್ರಗಳು ನಮ್ಮನ್ನು ಹೆದರಿಸುವುದಿಲ್ಲ ಅಥವಾ ಮೌನಗೊಳಿಸುವುದಿಲ್ಲ ಅಥವಾ ನಮ್ಮನ್ನು ಕೆಳಗಿಳಿಸುವುದಿಲ್ಲ' ಎಂದು ಅವರು ಹೇಳಿದರು.
ಎಂಎಸ್‌ಎಂಇಗಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ. ರೈತರಿಗೆ ನೀಡಿರುವ ಭರವಸೆಗಳು ಈಡೇರುವ ಲಕ್ಷಣ ಕಾಣುತ್ತಿಲ್ಲ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಸಗೊಬ್ಬರಗಳು ಮತ್ತು ಇತರೆ ಅಗತ್ಯ ವಸ್ತುಗಳ ಬೆಲೆಗಳು ಅಸಹನೀಯ ಮಿತಿಗೆ ಏರಿವೆ ಮತ್ತು ಏರಿಕೆಯಾಗುತ್ತಲೇ ಇವೆ ಎಂದು ಟೀಕಿಸಿದರು.
ಹಲವು ಪ್ರಯತ್ನಗಳ ಹೊರತಾಗಿಯೂ, ನಮ್ಮ ಗಡಿಗಳಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚೆಗೆ ಸರ್ಕಾರವನ್ನು ಒಪ್ಪಿಸಲು ನಮಗೆ ಸಾಧ್ಯವಾಗಲಿಲ್ಲ. ಚರ್ಚೆಯಿಂದ ಮಾತ್ರವೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.
ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಜೀವನೋಪಾಯದ ಅಭದ್ರತೆಯ ಸಮಯದಲ್ಲಿ ಕಾರ್ಮಿಕ ಕಾನೂನುಗಳನ್ನು ಸರ್ಕಾರ ದುರ್ಬಲಗೊಳಿಸುತ್ತಿದೆ. ಉದ್ಯೋಗಿ ಭವಿಷ್ಯ ನಿಧಿ ಸಂಗ್ರಹಣೆಯ ಮೇಲಿನ ಬಡ್ಡಿದರಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.