ಮೈಸೂರು: ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪ್ರಿಯಾಂಕಾ ಗಾಂಧಿ, ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಸಂಜೆ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ವಯನಾಡ್‌ಗೆ ತೆರಳಿದರು.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಸಂಜೆ 6.10ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಾಗತಿಸಿದರು. ಸಂಜೆ 6.30ರ ವೇಳೆಗೆ ಸೋನಿಯಾ, ಪ್ರಿಯಾಂಕಾ ಹಾಗೂ ಕುಟುಂಬದವರು ರಸ್ತೆ ಮಾರ್ಗದ ಮೂಲಕ ವಯನಾಡ್‌ನತ್ತ ಪ್ರಯಾಣಿಸಿದರು.
ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ದರ್ಶನ್ ಧ್ರುವನಾರಾಯಣ್, ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಈ ಸಂದರ್ಭ ಇದ್ದರು.
ವಯನಾಡ್‌ಗೆ ನನ್ನ ಸಹೋದರಿಗಿಂತ ಉತ್ತಮ ಪ್ರತಿನಿಧಿ ಊಹಿಸಲಾರೆ: ರಾಹುಲ್
ನವದೆಹಲಿ: ‘ವಯನಾಡ್‌ನ ಜನರಿಗೆ ನನ್ನ ಹೃದಯದಲ್ಲಿ ಬಹಳ ವಿಶೇಷವಾದ ಸ್ಥಾನವಿದೆ. ಆ ಜನರನ್ನು ಪ್ರತಿನಿಧಿಸಲು ನನ್ನ ಸಹೋದರಿಗಿಂತ ಉತ್ತಮರನ್ನು ನಾನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಅವರು ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಯುಡಿಎಫ್ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳವಾರ ರಾಹುಲ್ ಹಾಗೂ ಪ್ರಿಯಾಂಕಾ ಕೇರಳಕ್ಕೆ ತೆರಳಲಿದ್ದಾರೆ. ಇದಕ್ಕೂ ಮುನ್ನ ರಾಹುಲ್ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಈ ಕ್ಷೇತ್ರದ ಬೇಕು–ಬೇಡಗಳ ಕುರಿತು ಸಂಸತ್ತಿನಲ್ಲಿ ಆಕೆ ಶಕ್ತಿಯುತವಾಗಿ ತನ್ನ ಧ್ವನಿ ಇರಿಸಲಿದ್ದಾಳೆ ಎನ್ನುವ ಬಗ್ಗೆ ನನಗೆ ಬಲವಾದ ನಂಬಿಕೆ ಇದೆ’ ಎಂದು ಹೇಳಿದ ರಾಹುಲ್, ನಾಮಪತ್ರಕ್ಕೂ ಮುನ್ನ ಆಯೋಜನೆಗೊಂಡಿರುವ ರೋಡ್‌ಶೊನಲ್ಲಿ ಭಾಗವಹಿಸುವಂತೆ ಜನರಲ್ಲಿ ಕೋರಿದ್ದಾರೆ. ‘ನಾವೆಲ್ಲರೂ ಒಗ್ಗೂಡಿ ವಯನಾಡ್ ಇನ್ನು ಮುಂದೆಯೂ ಪ್ರೀತಿಯನ್ನು ಪ್ರತಿನಿಧಿಸುವಂತೆ ಮಾಡೋಣ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.