ADVERTISEMENT

ಕಾಂಗ್ರೆಸ್ಸನ್ನು ಮುಜುಗರಕ್ಕೆ ಸಿಲುಕಿಸಿದ ಅಧಿರ್ ರಂಜನ್ ಚೌಧರಿ ಹೇಳಿಕೆ

ಪಾಕ್ ಆಕ್ರಮಿತ ಕಾಶ್ಮೀರವೂ ದೇಶದ ಅಂಗ, ಅದಕ್ಕಾಗಿ ಪ್ರಾಣ ಕೊಡಲೂ ಸಿದ್ಧ: ಅಮಿತ್ ಶಾ

ಏಜೆನ್ಸೀಸ್
Published 7 ಆಗಸ್ಟ್ 2019, 5:24 IST
Last Updated 7 ಆಗಸ್ಟ್ 2019, 5:24 IST
   

ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 370ರ ರದ್ದು ನಿಲುವಳಿ ಮೇಲಿನ ಚರ್ಚೆ ವೇಳೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ನೀಡಿದ ಹೇಳಿಕೆ ಪಕ್ಷವನ್ನು ಮುಜುಗರಕ್ಕೀಡುಮಾಡಿದೆ.

ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಅಂಗ ಎಂಬುದಕ್ಕೆ ಸಂಬಂಧಿಸಿ 1994ರ ನಿಲುವಳಿಯೊಂದನ್ನು ಉಲ್ಲೇಖಿಸಿ ಮಾತನಾಡಿದ ಚೌಧರಿ, ಈ ಕುರಿತು ಸರ್ಕಾರದ ನಿಲುವು ಏನೆಂಬುದು ಸ್ಪಷ್ಟವಾಗಬೇಕು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಪ್ರಸ್ತಾವ ಮಂಡಿಸುವ ಮೂಲಕ ಕೇಂದ್ರ ಸರ್ಕಾರ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿದೆ ಎಂದು ಆರೋಪಿಸಿದರು.

ಇದನ್ನು ಅಲ್ಲಗಳೆದ ಗೃಹ ಸಚಿವ ಅಮಿತ್ ಶಾ, ಸುಖಾಸುಮ್ಮನೆ ಆರೋಪ ಮಾಡಬೇಡಿ. ಯಾವ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿ. ನಾನು ಉತ್ತರ ನೀಡುತ್ತೇನೆ ಎಂದರು.

ಆಗ ಮಾತನಾಡಿದ ಚೌಧರಿ, ‘ನೀವು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಯೋಚಿಸುತ್ತಿದ್ದೀರಿ ಎಂದು ನನಗನಿಸುತ್ತಿಲ್ಲ. ರಾತ್ರೋರಾತ್ರಿ ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡುವ ಮೂಲಕ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದೀರಿ’ ಎಂದರು.

‘ಇದು ಆಂತರಿಕ ವಿಚಾರ ಎಂದು ನೀವು (ಸರ್ಕಾರ) ಹೇಳುತ್ತೀರಿ. 1948ರಿಂದಲೂ ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ನಿಯಂತ್ರಿಸುತ್ತಿದೆ. ಹಾಗಿದ್ದ ಮೇಲೆ ಇದು ಆಂತರಿಕ ವಿಚಾರವೇ? ನಾವು ಶಿಮ್ಲಾ ಮತ್ತು ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇವು ಆಂತರಿಕ ವಿಷಯಗಳೇ ಅಥವಾ ದ್ವಿಪಕ್ಷೀಯ ವಿಚಾರಗಳೇ? ಜಮ್ಮು ಮತ್ತು ಕಾಶ್ಮೀರ ಈಗಲೂ ಆಂತರಿಕ ವಿಚಾರವೇ? ನಮಗೆ ಸ್ಪಷ್ಟನೆ ಬೇಕು. ಇಡೀ ಕಾಂಗ್ರೆಸ್ ಪಕ್ಷವು ನಿಮ್ಮಿಂದ ಮಾಹಿತಿ ಬಯಸಿದೆ’ ಎಂದು ಅಧಿರ್ ಹೇಳಿದರು.

‘ಪಿಒಕೆಗಾಗಿ ಪ್ರಾಣ ಕೊಡಲೂ ಸಿದ್ಧ’:ಚೌಧರಿ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಮಿತ್ ಶಾ, ‘ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ನೀವು ಪರಿಗಣಿಸುವುದಿಲ್ಲವೇ? ನೀವು ಏನು ಹೇಳುತ್ತಿದ್ದೀರಿ?’ ಎಂದು ಮರು ಪ್ರಶ್ನೆ ಹಾಕಿದರು.

ಜತೆಗೆ, ‘ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ. ನಾನು ಜಮ್ಮು ಮತ್ತು ಕಾಶ್ಮೀರದ ಹೆಸರು ಪ್ರಸ್ತಾಪಿಸುವಾಗಲೆಲ್ಲ ಅದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರವೂ (ಪಿಒಕೆ) ಸೇರಿರುತ್ತದೆ. ಪಿಒಕೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಬರುವುದಿಲ್ಲ ಎಂದು ನೀವು ಭಾವಿಸಿದ್ದು ನನ್ನ ಆಕ್ರೋಶಕ್ಕೆ ಕಾರಣ. ಪಿಒಕೆಗಾಗಿ ಪ್ರಾಣ ಕೊಡಲೂ ನಾವು ಸಿದ್ಧರಿದ್ದೇವೆ’ ಎಂದು ಶಾ ಹೇಳಿದರು.

‘ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಗಡಿಗಳು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸಾಯ್ ಚಿನ್ ಪ್ರಾಂತ್ಯಗಳನ್ನೂ ಒಳಗೊಳ್ಳುತ್ತವೆ’ ಎಂದೂ ಗೃಹ ಸಚಿವ ಸ್ಪಷ್ಟಪಡಿಸಿದರು.

ಹೇಳಿಕೆ ತಪ್ಪಾಗಿ ಬಿಂಬಿಸಲಾಗಿದೆ: ಚೌಧರಿ

ಹೇಳಿಕೆಯು ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಆ ಕುರಿತು ಚೌಧರಿಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಹಾಗೂ ವರದಿ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಇವನ್ನೂಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.