ನವದೆಹಲಿ: ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕುರಿತು ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ವರದಿಯಾಗಿದೆ.
ಈ ಕುರಿತು ಕಾಂಗ್ರೆಸ್‌ನ ಹಲವು ಹಿರಿಯ ನಾಯಕರೊಂದಿಗೆ ಸೋನಿಯಾ ಗಾಂಧಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಕೆಲವು ನಾಯಕರು ಅಪಸ್ವರವನ್ನು ಎತ್ತಿದ್ದಾರೆ. ಇನ್ನು ಕೆಲವರು ಪಕ್ಷದ ಹಿತದೃಷ್ಟಿಯಿಂದ ಒಲವು ತೋರಿದ್ದಾರೆ ಎಂಬುದು ತಿಳಿದು ಬಂದಿದೆ.
ಈ ಎಲ್ಲದರ ನಡುವೆ ಅಂತಿಮ ನಿರ್ಧಾರವು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಪಕ್ಷದಲ್ಲಿ ಬದಲಾವಣೆ ಬಯಸಿದ್ದ 23 ನಾಯಕರ ಗುಂಪು, ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ಗೆ ಸೇರ್ಪಡೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿವೆಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ಪ್ರಶಾಂತ್ ಕಿಶೋರ್, ಚುನಾವಣಾ ನಿರ್ವಹಣೆಯ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳುವ ಕುರಿತಾಗಿ ಚರ್ಚೆ ನಡೆಸಿದ್ದರು.
2014ರ ಲೋಕಸಭಾ ಚುನಾಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ನೆರವಾಗಿದ್ದ ಪ್ರಶಾಂತ್ ಕಿಶೋರ್, ಬಳಿಕ ಜೆಡಿಯು ಪಕ್ಷವನ್ನು ಸೇರಿದ್ದರು.
ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭಾಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆ ಕೆಲಸ ಮಾಡಿರುವ ಪ್ರಶಾಂತ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಇತ್ತೀಚಿಗಷ್ಟೇ ಅವರು ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.