ಚೆನ್ನೈ: ಕರುಣಾನಿಧಿ ಅವರು ನನಗೆ ತಂದೆ ಸಮಾನರಾಗಿದ್ದರು. ಅವರ ಅಗಲಿಕೆ ನನಗೆ ವೈಯಕ್ತಿಕ ನೋವು ತಂದಿದೆ. ಕರುಣಾನಿಧಿಯಂತಹ ವ್ಯಕ್ತಿಯನ್ನು ಮುಂದೆ ನೋಡಲು ಸಾಧ್ಯವಿಲ್ಲ...
ಈ ರೀತಿಯಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯನಾಯಕತ್ವದಲ್ಲಿ ವಿವೇಕತೆ, ರಾಷ್ಟ್ರ ಹಾಗೂ ರಾಷ್ಟ್ರದ ಜನರಿಗಾಗಿ ಶ್ರಮಿಸಿದ ಅರ್ಪಣಾ ಭಾವದ ಕರುಣಾನಿಧಿ ಅವರನ್ನು ಕಳೆದುಕೊಂಡ ನಮ್ಮ ರಾಷ್ಟ್ರ ಬಡವಾಗಿದೆ.
ನಿಮ್ಮ ಪ್ರೀತಿಯ ತಂದೆ ಕರುಣಾನಿಧಿ ಅವರ ಸಾವು ನನಗೆ ಅತೀವ ದುಃಖವನ್ನುಂಟು ಮಾಡಿದೆ. ರಾಷ್ಟ್ರ ಹಾಗೂ ತಮಿಳುನಾಡಿನ ಸಮಾಜ ಸೇವೆ ಹಾಗೂ ಜಗತ್ತಿನ ರಾಜಕಾರಣ ವಿಚಾರದಲ್ಲಿ ಕರುಣಾನಿಧಿ ಅವರದ್ದು ಮೇರು ವ್ಯಕ್ತಿತ್ವ. ಇವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯ, ಸಮಾನತೆ, ತಮಿಳುನಾಡಿನ ಅಭಿವೃದ್ಧಿ, ಸಮೃದ್ಧಿಗಾಗಿ ಶ್ರಮಿಸಿದವರು. ಪ್ರತಿಯೊಬ್ಬ ನಾಗರಿಕ ಅದಕ್ಕಿಂತ ಮುಖ್ಯವಾಗಿ ಬಡವರ ಉದ್ಧಾರಕ್ಕಾಗಿ ದುಡಿದವರು. ಉತ್ತಮ ಬರಹಗಾರರಾಗಿದ್ದ ಅವರು ತಮ್ಮ ಅಕ್ಷರ, ಸಾಲುಗಳ ಮೂಲಕ ತಮಿಳುನಾಡಿನ ಶ್ರೀಮಂತಿಕೆ, ಕಲೆ, ಸಂಸ್ಕೃತಿ ಜಗತ್ತಿನಾದ್ಯಂತ ಪಸರಿಸಿದವರು. ತಮಿಳುನಾಡಿನ ರಾಜಕೀಯ ಪರಂಪರೆಯಲ್ಲಿ ದಶಕಗಳ ಕಾಲ ನೆಲೆಯೂರಿದ ಅವರ ಸಾಧನೆ ಅಪಾರವಾದುದು ಹಾಗೂ ಅವರ ಈ ನಡಿಗೆ ನೆನಪಿನಲ್ಲಿಡುವಂತದ್ದು ಹಾಗೂ ಗೌರವಪೂರ್ವಕವಾದುದು. ಅವರ ಈ ಪರಂಪರೆಯನ್ನು ನೀವು ಮುಂದುವರೆಸಿಕೊಂಡು ಹೋಗುವಿರಿ ಎಂಬ ನಂಬಿಕೆಯಿದೆ.
ಕರುಣಾನಿಧಿ ಅವರ ನಿಧನ ನನಗೆ ನೋವನುಂಟು ಮಾಡಿದೆ. ನನ್ನನ್ನು ಯಾವಾಗಲೂ ಸ್ನೇಹಪೂರ್ವಕವಾಗಿ ಆದರಿಸುತ್ತಿದ್ದರು. ಪರಿಗಣಿಸುತ್ತಿದ್ದರು. ಇಂತಹ ವ್ಯಕ್ತಿತ್ವವನ್ನು ನಾನು ಹೇಗೆ ಮರೆಯಲಿ. ನನಗೆ ಅವರು ತಂದೆಯ ಸಮಾನ.
ತಂದೆಯ ಅಗಲಿಕೆಯ ಸಮಯದಲ್ಲಿ ನನ್ನ ಆಲೋಚನೆಗಳು, ಪ್ರಾರ್ಥನೆ ಸದಾ ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದೊಂದಿಗೆ ಇರುತ್ತದೆ. ನಿಮ್ಮ ತಂದೆ ಬದುಕಿದ ಪರಿಯನ್ನು ನೆನೆದು ಸಮಾಧಾನ ಮಾಡಿಕೊಳ್ಳಬೇಕಿದೆ. ಇದೀಗ ಅವರು ನೋವಿನಿಂದ ಮುಕ್ತವಾಗಿದ್ದಾರೆ. ಅವರ ಅನಾರೋಗ್ಯದ ವೇಳೆ ನಿಸ್ವಾರ್ಥವಾಗಿ ಆರೈಕೆ ಮಾಡಿದ್ದೀರಿ. ಕರುಣಾನಿಧಿಯಂತಹ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಪತ್ರ ಬರೆದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.