ADVERTISEMENT

ಭಾರತೀಯ ಸಂಪ್ರದಾಯ ಕಲಿಯಲು ಕಷ್ಟಪಟ್ಟಿದ್ದ ಸೋನಿಯಾ: ತಾಯಿಯ ಬಗ್ಗೆ ಪ್ರಿಯಾಂಕಾ ಮಾತು

ಪಿಟಿಐ
Published 16 ಜನವರಿ 2023, 14:22 IST
Last Updated 16 ಜನವರಿ 2023, 14:22 IST
ಕಾರ್ಯಕ್ರಮವೊಂದರಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ
ಕಾರ್ಯಕ್ರಮವೊಂದರಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ    

ಬೆಂಗಳೂರು: ಇಟಲಿ ಮೂಲದ ಸೋನಿಯಾ ಗಾಂಧಿ ಅವರು ಆರಂಭದಲ್ಲಿ ಭಾರತೀಯ ಸಂಪ್ರದಾಯಗಳನ್ನು ಕಲಿಯಲು ಹೆಣಗಾಡುತ್ತಿದ್ದರು ಮತ್ತು ರಾಜಕೀಯವನ್ನು ಇಷ್ಟಪಡುತ್ತಿರಲಿಲ್ಲ ಎಂದು ಅವರ ಪುತ್ರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ನಾ ನಾಯಕಿ’ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಇಬ್ಬರು ಧೈರ್ಯಶಾಲಿ, ಬಲಿಷ್ಠ ಮಹಿಳೆಯರೊಂದಿಗೆ ಬೆಳೆದಿದ್ದೇನೆ. ಅಜ್ಜಿ ಇಂದಿರಾ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿಯವರೇ ಆ ಇಬ್ಬರು ಮಹಿಳೆಯರು’ ಎಂದು ಪ್ರಿಯಾಂಕಾ ಹೇಳಿದರು.

ಇಂದಿರಾ ಗಾಂಧಿಯವರು ತಮ್ಮ ಮಗನನ್ನು (ರಾಜೀವ್‌ ಗಾಂಧಿಯವರನ್ನು) ಕಳೆದುಕೊಂಡಾಗ ನನಗೆ ಎಂಟು ವರ್ಷ ವಯಸ್ಸಾಗಿತ್ತು ಎಂದು ಅವರು ನೆನಪಿಸಿಕೊಂಡರು. ಸಂಜಯ್ ಗಾಂಧಿಯವರ ಮರಣದ ಮರುದಿನವೇ ಇಂದಿರಾ ಅವರು ರಾಷ್ಟ್ರದ ಸೇವೆ ಮರಳಿದ್ದರು. ಅದು ಅವರ ಕರ್ತವ್ಯ ಪ್ರಜ್ಞೆ ಮತ್ತು ಅಂತಃಶಕ್ತಿಯನ್ನು ಪ್ರದರ್ಶಿಸುತ್ತದೆ. ಇಂದಿರಾ ಗಾಂಧಿ ಅವರು ಸಾಯುವವರೆಗೂ ರಾಷ್ಟ್ರದ ಸೇವೆಯನ್ನು ಮುಂದುವರೆಸಿದ್ದರು ಎಂದು ಪ್ರಿಯಾಂಕಾ ಹೇಳಿದರು.

ADVERTISEMENT

ಸೋನಿಯಾ ಗಾಂಧಿ ಅವರು ತಮ್ಮ 21ನೇ ವಯಸ್ಸಿನಲ್ಲಿ ರಾಜೀವ್ ಗಾಂಧಿ ಅವರನ್ನು ಪ್ರೀತಿಸಲಾರಂಭಿಸಿದ್ದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

'ಅವರು (ಸೋನಿಯಾ) ರಾಜೀವ್‌ ಗಾಂಧಿ ಅವರನ್ನು ಮದುವೆಯಾಗಲು ಇಟಲಿಯಿಂದ ಭಾರತಕ್ಕೆ ಬಂದಿದ್ದರು. ಮದುವೆ ನಂತರ ಭಾರತದ ಸಂಪ್ರದಾಯಗಳನ್ನು ಕಲಿಯಲು ಒದ್ದಾಡಿದ್ದರು. ಆದರೆ, ಭಾರತದ ಸಂಸ್ಕೃತಿಯನ್ನು ಕಲಿತರು. ಇಂದಿರಾ ಅವರಿಮದ ಎಲ್ಲವನ್ನೂ ಕಲಿತಿದ್ದಾರೆ. ತಮ್ಮ 44 ನೇ ವಯಸ್ಸಿನಲ್ಲಿ ಅವರು ತಮ್ಮ ಪತಿಯನ್ನೇ ಕಳೆದುಕೊಂಡಿದ್ದಾರೆ’ ಎಂದು ತಾಯಿಯ ಬಗ್ಗೆ ಮರುಕ ವ್ಯಕ್ತಪಡಿಸಿದರು.

‘ಸೋನಿಯಾ ಅವರು ರಾಜಕೀಯವನ್ನು ಇಷ್ಟಪಡುವುದಿಲ್ಲ. ಆದರೂ ದೇಶ ಸೇವೆಯ ಹಾದಿಯನ್ನು ಅವರು ಹಿಡಿದ್ದಾರೆ. ಈ 76ನೇ ವಯಸ್ಸಿನಲ್ಲೂ ಅವರು ದೇಶಸೇವೆಯಲ್ಲಿ ತೊಡಗಿದ್ದಾರೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಸೋನಿಯಾ ಅವರು ಇಂದಿರಾ ಗಾಂಧಿಯವರಿಂದ ‘ಬಹಳ ಮುಖ್ಯವಾದ ವಿಷಯಗಳನ್ನೂ’ ಕಲಿತಿದ್ದಾರೆ ಎಂದು ಪ್ರಿಯಾಂಕಾ ಹೇಳಿದರು.

‘ಜೀವನದಲ್ಲಿ ನಿಮಗೆ ಏನೇ ಆಗಿರಲಿ, ಎಷ್ಟೇ ದೊಡ್ಡ ದುರಂತವನ್ನು ಎದುರಿಸಿರಲಿ, ಮನೆ, ಕೆಲಸ ಅಥವಾ ಹೊರ ಜಗತ್ತಿನಲ್ಲಿ ಎಷ್ಟು ಆಳವಾದ ಹೋರಾಟಗಳನ್ನು ಮಾಡಿದ್ದರು, ನಿಮಗಾಗಿ ಎದ್ದುನಿಂತು ಹೋರಾಡುವ ಸಾಮರ್ಥ್ಯ ಅವರಿಗಿದೆ’ ಎಂದು ಪ್ರಿಯಾಂಕಾ ಹೇಳಿದರು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.