ನವದೆಹಲಿ: ಅಸ್ಸಾಂನ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಗರಿಗೆದರಿದ್ದು, ಹುದ್ದೆಯ ಆಕಾಂಕ್ಷಿಗಳಾದ ಸರ್ಬಾನಂದ ಸೋನೊವಾಲ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಿಜೆಪಿಯ ಅಸ್ಸಾಂ ಶಾಸಕಾಂಗ ಪಕ್ಷವು ಭಾನುವಾರ ಗುವಾಹಟಿಯಲ್ಲಿ ಸಭೆ ಸೇರುವ ಸಾಧ್ಯತೆಯಿದ್ದು, ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಅಲ್ಲಿ ಉತ್ತರಿಸಲಾಗುವುದು ಎಂದು ಸರಣಿ ಸಭೆಗಳ ಬಳಿಕ ಶರ್ಮಾ ತಿಳಿಸಿದರು.
ಅಸ್ಸಾಂನಲ್ಲಿ ನಾಯಕತ್ವದ ವಿಷಯದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸೋನೊವಾಲ್ ಮತ್ತು ಆರೋಗ್ಯ ಸಚಿವ ಶರ್ಮಾ ಇಬ್ಬರನ್ನು ಬಿಜೆಪಿ ಕೇಂದ್ರ ನಾಯಕರು ದೆಹಲಿಗೆ ಕರೆಸಿದ್ದರು.
ಅಸ್ಸಾಂನ ಈ ಇಬ್ಬರೂ ನಾಯಕರ ಜೊತೆ ನಡ್ಡಾ ಅವರ ನಿವಾಸದಲ್ಲಿ ಶಾ ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಮ್ಮುಖದಲ್ಲಿ ಮೂರು ಸುತ್ತಿನ ಮಾತುಕತೆಗಳು ನಡೆದವು.
ಮೊದಲೆರಡು ಸುತ್ತಿನ ಮಾತುಕತೆಯಲ್ಲಿ ಇಬ್ಬರೂ ನಾಯಕರನ್ನು ರಾಷ್ಟ್ರೀಯ ನಾಯಕರು ಪ್ರತ್ಯೇಕವಾಗಿ ಭೇಟಿ ಮಾಡಿದರು. ಮೂರನೇ ಸುತ್ತಿನ ಮಾತುಕತೆಯಲ್ಲಿ ಇಬ್ಬರೂ ಆಕಾಂಕ್ಷಿಗಳನ್ನು ಒಟ್ಟಿಗೆ ಕೂರಿಸಿ ಮಾತುಕತೆ ನಡೆಸಲಾಯಿತು.
ಅಸ್ಸಾಂನಲ್ಲಿ ಹೊಸ ಸರ್ಕಾರ ರಚನೆ ಹಾಗೂ ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಮಾತುಕತೆ ನಡೆಸಲಾಯಿತು. ಸೋನೊವಾಲ್ ಮತ್ತು ಶರ್ಮಾ ಪ್ರತ್ಯೇಕವಾಗಿ ನಡ್ಡಾ ಅವರ ನಿವಾಸಕ್ಕೆ ಬಂದರೂ, ಸಭೆಗಳ ನಂತರ ಒಂದೇ ಕಾರಿನಲ್ಲಿ ಹೊರಟರು.
ಸೋನೊವಾಲ್ ಅವರು ಅಸ್ಸಾಂನ ಸ್ಥಳೀಯ ಸೋನೊವಾಲ್-ಕಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ. ಅಸ್ಸಾಂ ಬ್ರಾಹ್ಮಣರಾದ ಹಿಮಂತ ಬಿಸ್ವ ಶರ್ಮಾ ಅವರು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕರಾಗಿ
ದ್ದಾರೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿರಲಿಲ್ಲ. 2016ರ ಚುನಾವಣೆಯಲ್ಲಿ ಸೋನೊವಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದಿತ್ತು.
126 ಸದಸ್ಯಬಲದ ಅಸ್ಸಾಂವಿಧಾನಸಭೆಯಲ್ಲಿ ಬಿಜೆಪಿ 60 ಕ್ಷೇತ್ರಗಳಲ್ಲಿ ಹಾಗೂ ಮಿತ್ರಪಕ್ಷಗಳಾದ ಎಜಿಪಿ 9 ಕ್ಷೇತ್ರಗಳಲ್ಲಿ, ಯುಪಿಪಿಎಲ್ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.