ADVERTISEMENT

ಪ್ರಾದೇಶಿಕ ಭಾಷೆ ಬಳಸದಂತೆ ಹೊರಡಿಸಿದ್ದ ಸುತ್ತೋಲೆ ವಾಪಸ್‌ ಪಡೆದ ದಕ್ಷಿಣ ರೈಲ್ವೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 4:00 IST
Last Updated 15 ಜೂನ್ 2019, 4:00 IST
   

ಚೆನ್ನೈ: ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳ ಆಕ್ರೋಶದಿಂದಾಗಿ ಪ್ರಾದೇಶಿಕ ಭಾಷೆ ಬಳಸದಿರುವ ಕುರಿತು ಹೊರಡಿಸಿದ್ದ ಸುತ್ತೋಲೆಯನ್ನು ದಕ್ಷಿಣ ರೈಲ್ವೆ ವಾಪಸ್‌ ಪಡೆದಿದೆ.

ದಕ್ಷಿಣ ರೈಲ್ವೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ನಿಲ್ದಾಣ ಮುಖ್ಯಸ್ಥರು ಸಂವಹನಕ್ಕೆ ಹಿಂದಿ ಅಥವಾ ಇಂಗ್ಲಿಷ್‌ ಬಳಸಬೇಕು. ಪ್ರಾದೇಶಿಕ ಭಾಷೆಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂದು ಹೊರಡಿಸಲಾಗಿದ್ದ ಸುತ್ತೋಲೆ ಬಗ್ಗೆ ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.ಇದು ಹಿಂದಿ ಹೇರಿಕೆಯ ಪ್ರಯತ್ನ ಎಂದು ರಾಜಕೀಯ ಪಕ್ಷಗಳು ದೂರಿದ್ದವು.

ಮೇ ತಿಂಗಳಲ್ಲಿಯೇ ಈ ಸುತ್ತೋಲೆ ಹೊರಡಿಸಲಾಗಿತ್ತು.

ADVERTISEMENT

ಆದರೆ ಗುರುವಾರ ಒಂದೇ ಹಳಿಯ ಮೇಲೆ ಎರಡು ರೈಲುಗಳು ಸಂಚರಿಸುತ್ತಿರುವ ಕುರಿತು ಮಧುರೈ ಜಿಲ್ಲೆಯ ಇಬ್ಬರು ನಿಲ್ದಾಣ ಮುಖ್ಯಸ್ಥರ ನಡುವಿನ ಮಾತುಕತೆ ವೇಳೆ ಭಾಷಾ ಸಮಸ್ಯೆ ಉದ್ಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಸುತ್ತೋಲೆಯನ್ನು ಉಲ್ಲೇಖಿಸಿ ಶುಕ್ರವಾರ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

‘ತಮಿಳಿಯನ್ನರ ಸಂವೇದನೆಗಳ ಜತೆ ಪದೇ ಪದೇ ಆಟವಾಡಲಾಗುತ್ತಿದೆ. ಇಂತಹ ಸುತ್ತೋಲೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದಲ್ಲಿ, ನಾವೇ ಇಂತಹ ನಡೆಗಳಿಗೆ ಒಂದು ಪೂರ್ಣ ವಿರಾಮ ಇಡಬೇಕಾಗುತ್ತದೆ’ ಎಂದು ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಮಿಳು ಭಾಷೆಯಲ್ಲಿ ಬರೆದುಕೊಂಡಿದ್ದಾರೆ.

ಸ್ಟಾಲಿನ್‌ ಅವರ ನಿರ್ದೇಶನದ ಮೇರೆಗೆ, ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಪಕ ರಾಹುಲ್‌ ಜೈನ್‌ ಮತ್ತು ಮುಖ್ಯ ನಿರ್ವಹಣಾ ವ್ಯವಸ್ಥಾಪಕ ಎಸ್‌. ಅನಂತರಾಮನ್‌ ಅವರಿಗೆ ಪತ್ರ ಬರೆದು ಈ ಸುತ್ತೋಲೆಯನ್ನು ವಿರೋಧಿಸಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ತಕ್ಷಣದಿಂದಲೇ ಸುತ್ತೋಲೆಯನ್ನು ವಾಪಸ್‌ ಪಡೆಯುವುದಾಗಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಹಿಂದಿ ಹೇರಿ ಕೆಯನ್ನು ವಿರೋಧಿಸಲು ಡಿಎಂಕೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ದಯಾನಿಧಿ ಮಾರನ್‌ ಮಾಧ್ಯಮಗಳಿಗೆ ಹೇಳಿದ್ದಾರೆ.ಈ ಸುತ್ತೋಲೆಯು ಸಂಪೂರ್ಣವಾಗಿ ಇಲಾಖೆಯ ಆಂತರಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು, ಸಂವಹನ ಸಮಸ್ಯೆಯನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿತ್ತು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೊಸ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ವಿವಾದಗಳು ಉಂಟಾದ ಬೆನ್ನಿಗೇ ಈ ಸುತ್ತೋಲೆ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿವೆ.

ಪಿಎಂಕೆ ಸ್ಥಾಪಕ ಎಸ್‌. ರಾಮ್‌ದಾಸ್‌ , ಎಂಡಿಎಂಕೆ ಮುಖ್ಯಸ್ಥ ವೈಕೊ, ದ್ರಾವಿಡರ್‌ ಕಳಗಂ ಮುಖಂಡ ಕೆ. ವೀರಮಣಿ ಕೂಡ ಹಿಂದಿ ಹೇರಿಕೆಯ ಈ ಸುತ್ತೋಲೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

*
ಹಿಂದಿ ಹೇರಿಕೆಯ ಮೂಲಕ ಸ್ಥಳೀಯ ಭಾಷೆಯನ್ನು ನಾಶಮಾಡುವ ಉದ್ದೇಶದಿಂದ ಇದೊಂದು ಉದ್ಧಟತನದ ನಡೆಯಾಗಿದೆ.
-ಎಂ.ಕೆ. ಸ್ಟಾಲಿನ್‌, ಡಿಎಂಕೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.