ಚೆನ್ನೈ:ರೈಲ್ವೆ ಸ್ಟೇಷನ್ ಮಾಸ್ಟರ್‌ಗಳು ವಿಭಾಗೀಯ ನಿಯಂತ್ರಣ ಕಚೇರಿ (ಡಿವಿಷನಲ್ ಕಂಟ್ರೋಲ್ ಆಫೀಸ್) ಜತೆ ಸಂವಹನ ನಡೆಸುವಾಗ ಇಂಗ್ಲಿಷ್ ಅಥವಾ ಹಿಂದಿ ಭಾಷೆಯನ್ನೇ ಬಳಸಬೇಕೆಂದು ದಕ್ಷಿಣ ರೈಲ್ವೆ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ವಿರುದ್ಧ ರೈಲ್ವೆ ನಿಬ್ಬಂದಿಗಳು ಮತ್ತು ಡಿಎಂಕೆ ಪ್ರತಿಭಟನೆ ನಡೆಸಿದ್ದು, ದಕ್ಷಿಣ ರೈಲ್ವೆ ಈ ಸುತ್ತೋಲೆಯನ್ನು ಹಿಂಪಡೆದುಕೊಂಡಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಜೂನ್ 12ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸ್ಟೇಷನ್ ಮಾಸ್ಟರ್‌ಗಳು ಮತ್ತು ಡಿವಿಷನ್ ಕಂಟ್ರೋಲ್ ಆಫೀಸಿನ ಸಿಬ್ಬಂದಿಗಳು ಪರಸ್ಪರ ಸಂವಹನ ನಡೆಸುವಾಗ ಪ್ರಾದೇಶಿಕ ಭಾಷೆಗಳನ್ನು ಬಳಸಬಾರದು ಎಂಬ ಆದೇಶ ನೀಡಲಾಗಿತ್ತು.ಪ್ರಾದೇಶಿಕ ಭಾಷೆಯ ಸಂವಹನದಿಂದ ತಪ್ಪುಗಳಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿತ್ತು. ಆದಾಗ್ಯೂ, ದಕ್ಷಿಣ ರೈಲ್ವೆಯ ಈ ನಡೆ ವಿರುದ್ಧ ರೈಲ್ವೆ ಸಿಬ್ಬಂದಿಗಳು ಮತ್ತು ವಿಪಕ್ಷ ನಾಯಕರು ಪ್ರತಿಭಟಿಸಿದ್ದು ಇದು ತರ್ಕಹೀನ ಮತ್ತು ಹಿಂದಿ ಹೇರಿಕೆಯ ಹುನ್ನಾರ ಎಂದಿದ್ದಾರೆ.
ದಕ್ಷಿಣ ರೈಲ್ವೆ ಮೂಲಗಳ ಪ್ರಕಾರ, ತಪ್ಪಾದ ಸಂವಹನದಿಂದಾಗಿ ಮಧುರೈನಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದುಕೊಳ್ಳುವುದು ಕೂದಲೆಳೆಅಂತರದಲ್ಲಿ ತಪ್ಪಿತ್ತು. ಎರಡೂ ರೈಲುಗಳು ಒಂದೇ ಹಳಿಯಲ್ಲಿ ಚಲಿಸುವಂತೆ ರೈಲ್ವೆ ಸಿಬ್ಬಂದಿಗಳು ಸೂಚನೆ ನೀಡಿದ್ದರು. ತಕ್ಷಣವೇ ಒಂದು ರೈಲನ್ನು ನಿಲ್ಲಿಸುವ ಸೂಚನೆ ನೀಡಿ ಅವಘಡವನ್ನು ತಪ್ಪಿಸಲಾಗಿತ್ತು. ಸಿಬ್ಬಂದಿಗಳ ನಡುವಿನ ಸಂವಹನದಲ್ಲುಂಟಾದ ತಪ್ಪಾದ ಅರ್ಥೈಸುವಿಕೆ ಇದಕ್ಕೆ ಕಾರಣವಾಗಿತ್ತು.
ಶುಕ್ರವಾರ ಪರಿಷ್ಕೃತ ಸುತ್ತೋಲೆ ಹೊರಡಿದ ದಕ್ಷಿಣ ರೈಲ್ವೆ, ಸಿಬ್ಬಂದಿಗಳು ಸೂಚನೆ ನೀಡುವಾಗ ಮತ್ತು ಸ್ವೀಕರಿಸುವಾಗ ಎಚ್ಚರದಿಂದ ನಿರ್ವಹಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ. ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಸಂವಹನದಲ್ಲಿ ಯಾವುದೇ ತಪ್ಪುಗಳನ್ನುಂಟಾಗಬಾರದು ಎಂದು ಸುತ್ತೋಲೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.