ನವದೆಹಲಿ: ಈ ಬಾರಿ ನೈರುತ್ಯ ಮಾನ್ಸೂನ್ ಮಾರುತಗಳು ಭಾಗಶಃ ಸಾಮಾನ್ಯ ಮಳೆ ಸುರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಸೋಮವಾರ ತಿಳಿಸಿದೆ. ಅಲ್ಲದೆ, ಜೂನ್ ಮೊದಲ ವಾರದಲ್ಲಿ ಮಾರುತಗಳಿಗೆ ಸಂಬಂಧಿಸಿದಂತೆ ಹೊಸ ವರದಿ ಬಿಡುಗಡೆ ಮಾಡುವುದಾಗಿಯೂ ಇಲಾಖೆ ತಿಳಿಸಿದೆ.
‘ದೇಶದಲ್ಲಿ ನೈರುತ್ಯ ಮಾರುತಗಳು ವ್ಯಾಪಕವಾಗಿ ಸಾಮಾನ್ಯ ಮಳೆ ಸುರಿಸಲಿದ್ದು, ರೈತರಿಗೆ ಉತ್ತಮ ಕಾರೀಫ್ ಬೆಳೆ ದಕ್ಕಲಿದೆ. ಮುಂಗಾರು ಮಾರುತಗಳು ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಈ ಬಾರಿ ಶೇ.96ರಷ್ಟು ಮಳೆಗರೆಯಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಈ ಬಾರಿ ಮುಂಗಾರು ಮಾರುತಗಳ ಮೇಲೆ ‘ಎಲ್ ನಿನೋ’ ಪರಿಣಾಮ ಬೀರುವ ಸಾಧ್ಯತೆಗಳಿದ್ದವು. ಈ ಕುರಿತು ವಿವರಣೆ ನೀಡಿರುವ ಹವಾಮಾನ ಇಲಾಖೆ, ‘ಮುಂಗಾರು ಮಾರುತಗಳ ಅಂತ್ಯಭಾಗದಲ್ಲಿ ದುರ್ಬಲ ‘ಎಲ್ ನಿನೊ’ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ,’ ಎಂದು ತಿಳಿಸಿದೆ.
‘ಎಲ್ ನಿನೋ ವಿದ್ಯಮಾನದಿಂದ ಮಾರುತಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮಗಳಾಗುವ ಸಾಧ್ಯತೆಗಳು ಈ ಬಾರಿ ಇಲ್ಲ,’ ಎಂದು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ ರಾಜೀವನ್ ನಾಯರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.