ಲಖನೌ: ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್ ಎಂಟ್ರಿ’ ಮೂಲಕ ನೇಮಕ ಮಾಡಿಕೊಳ್ಳುವ ಕೇಂದ್ರದ ನಡೆಯನ್ನು ಸಮಾಜವಾದಿ ಪಕ್ಷ ಹಾಗೂ ಬಿಎಸ್‌ಪಿ ಖಂಡಿಸಿವೆ.
‘ಕೇಂದ್ರ ಸರ್ಕಾರದ ಈ ನಡೆ ಸಂವಿಧಾನದ ಉಲ್ಲಂಘನೆಯಾಗಲಿದೆ. ಉನ್ನತ ಹುದ್ದೆಗಳಿಗೆ ತನ್ನ ಸೈದ್ಧಾಂತಿಕ ಹಿನ್ನೆಲೆ ಉಳ್ಳವನ್ನು ಹಿಂಬಾಗಿಲ ಮೂಲಕ ನೇಮಕ ಮಾಡುವ ಬಿಜೆಪಿಯ ಪಿತೂರಿ ಭಾಗವಾಗಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ’ ಎಂದು ಎರಡೂ ಪಕ್ಷಗಳ ನಾಯಕರು ಟೀಕಿಸಿದ್ದಾರೆ.
ಇಂತಹ ನೇಮಕಾತಿ ಪ್ರಕ್ರಿಯೆಯನ್ನು ಹಿಂಪಡೆಯದಿದ್ದಲ್ಲಿ, ಅಕ್ಟೋಬರ್ 2ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬಿಜೆಪಿಯ ಈ ಪಿತೂರಿ ವಿರುದ್ಧ ದೇಶದಾದ್ಯಂತ ಚಳವಳಿ ನಡೆಸುವ ಸಮಯ ಬಂದಿದೆ’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
‘ಕೇಂದ್ರದ ಈ ನಡೆ, ಸದ್ಯದ ಅಧಿಕಾರಿಗಳು ಹಾಗೂ ಯುವಕರಿಗೆ ಉನ್ನತ ಹುದ್ದೆಗಳಿಗೇರುವ ಅವಕಾಶವನ್ನು ತಪ್ಪಿಸಲಿದೆ. ಸಾಮಾನ್ಯ ಜನರು ಗುಮಾಸ್ತ ಮತ್ತು ಜವಾನರಂತಹ ಹುದ್ದೆಗಳಿಗೆ ಸೀಮಿತವಾಗಬೇಕಾಗುತ್ತದೆ. ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ (ಪಿಡಿಎ) ಮೀಸಲಾತಿ ಹಾಗೂ ಹಕ್ಕುಗಳನ್ನು ಕಸಿಯುವುದೇ ಈ ತಂತ್ರದ ಮುಖ್ಯ ಉದ್ದೇಶ’ ಎಂದು ಆರೋಪಿಸಿದ್ದಾರೆ.
‘ಸಂವಿಧಾನವನ್ನು ಬುಡಮೇಲು ಮಾಡುವ ತನ್ನ ತಂತ್ರದ ಬಗ್ಗೆ ದೇಶದ ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರು ಎಚ್ಚೆತ್ತುಕೊಂಡಿದ್ದಾರೆ ಎಂಬುದು ಬಿಜೆಪಿಯವರಿಗೆ ಅರ್ಥವಾಗಿದೆ. ‘ಲ್ಯಾಟರಲ್ ಎಂಟ್ರಿ’ ನೇಮಕದ ಮೂಲಕ ಉನ್ನತ ಹುದ್ದೆಗಳಿಗೆ ನೇಮಕಾತಿಯ ಮೂಲಕ, ಮೀಸಲಾತಿಯನ್ನು ಕಸಿದುಕೊಳ್ಳಲು ಬಯಸುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಕೇಂದ್ರದ ಸರ್ಕಾರದ ಇಂತಹ ನಿರ್ಧಾರದಿಂದ ಕೆಳ ಹಂತದ ಹುದ್ದೆಗಳಲ್ಲಿರುವವರು ಬಡ್ತಿಯ ಪ್ರಯೋಜನದಿಂದ ವಂಚಿತರಾಗುವರು’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
‘ಲ್ಯಾಟರಲ್ ಎಂಟ್ರಿ ಜೊತೆಗೆ, ಸರ್ಕಾರದ ಹುದ್ದೆಗಳಿಗೆ ನಡೆಯುವ ನೇಮಕಾತಿಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ನಿಗದಿಯಾದ ಪ್ರಮಾಣದಷ್ಟು ಹುದ್ದೆಗಳನ್ನು ನೀಡದಿದ್ದರೆ, ಅದು ಸಂವಿಧಾನದ ನೇರ ಉಲ್ಲಂಘನೆಯಾಗಲಿದೆ’ ಎಂದು ಅವರು ಹೇಳಿದ್ದಾರೆ.
‘ಲ್ಯಾಟರಲ್ ಎಂಟ್ರಿ ಮೂಲಕ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡುವ ಕೇಂದ್ರದ ನಡೆ ‘ದೇಶ ವಿರೋಧಿ’. ಭಾರತೀಯ ಆಡಳಿತ ಸೇವೆಯ (ಐಎಎಸ್) ಖಾಸಗೀಕರಣವಾಗಿದ್ದು ಇದು ಮೋದಿ ಅವರ ಗ್ಯಾರಂಟಿ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
‘ಇಂತಹ ನಡೆ ಮೂಲಕ ಎಸ್‌ಸಿಎಸ್‌ಟಿ ಹಾಗೂ ಒಬಿಸಿಗಳಿಗಿರುವ ಮೀಸಲಾತಿಯನ್ನು ಬಹಿರಂಗವಾಗಿಯೇ ಕಸಿದುಕೊಳ್ಳುವುದಾಗಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಕೇಂದ್ರ ಲೋಕಸೇವಾ ಆಯೋಗದ ಬದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಉನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಅವರು ‘ಎಕ್ಸ್’ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
‘ಲ್ಯಾಟರಲ್ ಎಂಟ್ರಿ’ ನೇಮಕಾತಿ ದೇಶದ ಹಿತಾಸಕ್ತಿ ಒಳಗೊಂಡಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಈ ಪ್ರಕ್ರಿಯೆಯನ್ನು ಹಿಂಪಡೆಯಬೇಕು.-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
ಯಾವುದೇ ನಿಯಮಗಳನ್ನು ರೂಪಿಸದೇ ಲ್ಯಾಟರಲ್ ಎಂಟ್ರಿ ಮೂಲಕ ಉನ್ನತ ಹುದ್ದೆಗಳಿಗೆ ಮಾಡುವ ನೇಮಕಾತಿ ಬಿಜೆಪಿ ನೇತೃತ್ವದ ಸರ್ಕಾರದ ನಿರಂಕುಶತ್ವ ತೋರಿಸುತ್ತದೆ-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.