ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ (ಜೂನ್ 4) ರಂದು ಹೊರಬಿದ್ದಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕುಟುಂಬದ ನಾಲ್ವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ.
ಅಖಿಲೇಶ್ ಯಾದವ್ ಅವರು ಬಿಜೆಪಿಯ ಸುಬ್ರತ್ ಪಾಠಕ್ ಅವರನ್ನು 1,70,922 ಮತಗಳಿಂದ ಸೋಲಿಸಿದ್ದಾರೆ. ಮೈನ್‌ಪುರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಅವರು ಜಯವೀರ್ ಸಿಂಗ್ ವಿರುದ್ಧ 2,21,639 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿಗಳಾದ ಅಕ್ಷಯ್ ಯಾದವ್, ಧರ್ಮೇಂದ್ರ ಯಾದವ್ ಮತ್ತು ಆದಿತ್ಯ ಯಾದವ್ ಕ್ರಮವಾಗಿ ಫಿರೋಜಾಬಾದ್, ಆಜಂಗಢ ಮತ್ತು ಬದೌನ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸಮಾಜವಾದಿ ಪಕ್ಷವು 37 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿದೆ.
ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಹಾಗೂ ಎಸ್‌ಪಿ ನಾಯಕ ಶಿವಪಾಲ್ ಯಾದವ್ ಅವರಿಗೆ ಬದೌನ್‌ನಿಂದ ಟಿಕೆಟ್ ನೀಡಲಾಗಿತ್ತು. ಬಳಿಕ ಆ ಸ್ಥಾನಕ್ಕೆ ಶಿವಪಾಲ್ ಮಗ ಆದಿತ್ಯ ಅವರನ್ನು ಪಕ್ಷ ಕಣಕ್ಕಿಳಿಸಿತು.
ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಸ್ಥಾನಗಳಿಗೆ ವಿವಿಧ ಹಂತಗಳಲ್ಲಿ ಮತದಾನ ನಡೆದಿತ್ತು. ಸಮಾಜವಾದಿ ಪಕ್ಷವು 37, ಬಿಜೆಪಿ 33, ಕಾಂಗ್ರೆಸ್ 6 ಹಾಗೂ ಆರ್‌ಎಲ್‌ಡಿ 2 ಸ್ಥಾನಗಳನ್ನು ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.