ಲಖನೌ: ಲೋಕಸಭಾ ಚುನಾವಣೆಯಲ್ಲಿ 17 ಸ್ಥಾನಗಳನ್ನು ಬಿಟ್ಟುಕೊಡಲು ಒಪ್ಪದಿದ್ದರೆ ಮೈತ್ರಿಯಿಂದ ಹೊರನಡೆಯುವುದಾಗಿ ಸಮಾಜವಾದಿ ಪಕ್ಷವು (ಎಸ್‌ಪಿ) ಕಾಂಗ್ರೆಸ್‌ಗೆ ಬೆದರಿಕೆ ಒಡ್ಡಿದೆ. ಇದರಿಂದಾಗಿ ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಮಾತುಕತೆ ಕೊನೆಯ ಘಟ್ಟಕ್ಕೆ ತಲುಪಿದೆ.
17 ಸ್ಥಾನಗಳ ಪ್ರಸ್ತಾವ ಸಂಬಂಧ ಕಾಂಗ್ರೆಸ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಮೈತ್ರಿಯ ಮುಂದುವರಿಕೆಯು ಆ ಪಕ್ಷದ ಸಮ್ಮತಿಯನ್ನು ಅವಲಂಬಿಸಿದೆ ಎಂದು ಸಮಾಜವಾದಿ ಪಕ್ಷದ ಮೂಲಗಳು ಮಂಗಳವಾರ ತಿಳಿಸಿವೆ.
‘ನಾವು ನಮ್ಮ ಕೊನೆಯ ಪ್ರಸ್ತಾವವನ್ನು ಕಾಂಗ್ರೆಸ್ ಮುಂದಿಟ್ಟಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಜತೆ ಮೈತ್ರಿ ಬೇಕೊ ಬೇಡವೊ ಎಂಬುದನ್ನು ನಿರ್ಧರಿಸುವುದು ಅವರಿಗೆ ಬಿಟ್ಟ ವಿಚಾರ. ನಾವು ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ’ ಎಂದು ಎಸ್‌ಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಂಗ್ರೆಸ್ ಜತೆಗಿನ ಸೀಟು ಹಂಚಿಕೆ ಮಾತುಕತೆ ಫಲಪ್ರದ ಆಗುವವರೆಗೂ ತಾವು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಸೋಮವಾರ ತಿಳಿಸಿದ್ದರು. ಅದರಂತೆ ಅವರು ಸೋಮವಾರ ಮತ್ತು ಮಂಗಳವಾರ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ.
ಪಕ್ಷವು ರಾಜ್ಯದ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಇದುವರೆಗೆ 31 ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.
ಆದಾಗ್ಯೂ, ಸೀಟು ಹಂಚಿಕೆ ಮತುಕತೆ ಇನ್ನೂ ನಡೆಯುತ್ತಿದ್ದು, ಮೈತ್ರಿಗೆ ಯಾವುದೇ ಭಂಗವಿಲ್ಲ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಲಖನೌ: ಸಮಾಜವಾದಿ ಪಕ್ಷವು (ಎಸ್‌ಪಿ) ಉತ್ತರ ಪ್ರದೇಶದಲ್ಲಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮೂರನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು ಐದು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚಿಕ್ಕಪ್ಪ ಹಾಗೂ ಹಿರಿಯ ನಾಯಕ ಶಿವಪಾಲ್ ಸಿಂಗ್ ಯಾದವ್ ಅವರನ್ನು ಬದೌನ್ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತಿದೆ. ಸುರೇಂದ್ರ ಸಿಂಗ್ ಪಟೇಲ್ (ವಾರಾಣಸಿ ಲೋಕಸಭಾ ಕ್ಷೇತ್ರ) ಇಕ್ರಾ ಹುಸೇನ್ (ಕೈರಾನಾ) ಪ್ರವೀಣ ಸಿಂಗ್ ಅರೋನ್(ಬರೇಲಿ) ಹಾಗೂ ಅಜೇಂದ್ರ ಸಿಂಗ್ ರಜಪೂತ್ (ಹಮೀರ್‌ಪುರ) ಅವರಿಗೆ ಟಿಕೆಟ್ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷವಾದ ಕಾಂಗ್ರೆಸ್‌ಗೆ 17 ಸೀಟುಗಳನ್ನು ಬಿಟ್ಟುಕೊಡುವುದಾಗಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.