ADVERTISEMENT

‘ವೋಟ್‌ ಜಿಹಾದ್‌’ಗೆ ಎಸ್‌ಪಿ ನಾಯಕಿ ಕರೆ

ಪಿಟಿಐ
Published 30 ಏಪ್ರಿಲ್ 2024, 15:49 IST
Last Updated 30 ಏಪ್ರಿಲ್ 2024, 15:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಫರೂಖಾಬಾದ್ (ಉತ್ತರ ಪ್ರದೇಶ): ‘ಇಂಡಿಯಾ’ ಮೈತ್ರಿಕೂಟದ ಫರೂಖಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಮತ ಯಾಚನೆ ಮಾಡುವ ವೇಳೆ ‘ವೋಟ್ ಜಿಹಾದ್‌’ಗೆ ಕರೆ ನೀಡಿದ ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ, ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಅಲ್ಪಸಂಖ್ಯಾತ ಸಮುದಾಯಕ್ಕೆ ಇದು ಅನಿವಾರ್ಯ ಎಂದಿದ್ದಾರೆ. 

ಮರಿಯಾ ಆಲಂ, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಸಲ್ಮಾನ್ ಖುರ್ಷಿದ್ ಅವರ ಸೋದರ ಸಂಬಂಧಿ. ಸೋಮವಾರ ಚುನಾವಣಾ ಸಭೆಯೊಂದರಲ್ಲಿ ಭಾಗವಹಿಸಿದ್ದ ಮರಿಯಾ, ಸಲ್ಮಾನ್ ಖುರ್ಷಿದ್ ಅವರ ಉಪಸ್ಥಿತಿಯಲ್ಲಿಯೇ ವೋಟ್ ಜಿಹಾದ್‌ಗೆ ಕರೆ ನೀಡಿದ್ದರು.

ADVERTISEMENT

‘ಇಂಡಿಯಾ’ ಕೂಟದ ಅಭ್ಯರ್ಥಿ ನವಲ್ ಕಿಶೋರ್ ಪರ ಪ್ರಚಾರ ಮಾಡುವ ವೇಳೆ ಕಾಯಂಗಂಜ್‌ನಲ್ಲಿ ಮಾತನಾಡುತ್ತಿದ್ದ ಅವರು, ‘ಜತೆಯಾಗಿ, ಬುದ್ಧಿವಂತಿಕೆಯಿಂದ, ಭಾವುಕರಾಗದೇ, ಮೌನವಾಗಿ ವೋಟ್ ಜಿಹಾದ್ ಮಾಡಿ. ಸಂಘಿ ಸರ್ಕಾರವನ್ನು ಕೆಳಗಿಳಿಸಲು ನಮಗಿರುವುದು ವೋಟ್ ಜಿಹಾದ್ ಮಾತ್ರ’ ಎಂದು ಹೇಳಿದ್ದಾರೆ.

‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿವೆ ಎಂದು ಜನ ಹೇಳುತ್ತಾರೆ. ಆದರೆ, ಮಾನವಕುಲವೇ ಅಪಾಯದಲ್ಲಿದೆ ಎಂದು ನಾನು ಹೇಳುತ್ತೇನೆ’ ಎಂದರು.

ಆಲಂ ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಆಲಂ ಹೇಳಿಕೆಯ ಬಗ್ಗೆ ಸಲ್ಮಾನ್ ಖುರ್ಷಿದ್ ಅವರನ್ನು ಪ್ರಶ್ನಿಸಿದಾಗ, ಆ ಪದದ ಅಕ್ಷರಶಃ ಅರ್ಥವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುವುದರಿಂದ ತಾನು ಸಾಮಾನ್ಯವಾಗಿ ಅದನ್ನು ಬಳಸುವುದಿಲ್ಲ ಎಂದು ಹೇಳಿದರು.

‘ಜಿಹಾದ್ ಎಂದರೆ, ಒಂದು ಸಂದರ್ಭದ ವಿರುದ್ಧ ಹೋರಾಡುವುದು. ಸಂವಿಧಾನವನ್ನು ರಕ್ಷಿಸಲು ವೋಟ್ ಜಿಹಾದ್ ಕಾರ್ಯರೂಪಕ್ಕೆ ತನ್ನಿ ಎನ್ನುವುದು ಆಕೆಯ ಉದ್ದೇಶವಿರಬಹುದು’ ಎಂದು ಅಭಿಪ್ರಾಯಪಟ್ಟರು.

ಕ್ರಮ ಜರುಗಿಸುವಂತೆ ಬಿಜೆಪಿ ಒತ್ತಾಯ: ಮರಿಯಾ ಆಲಂ ಅವರ ‘ವೋಟ್ ಜಿಹಾದ್’ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಿರೋಧ ಪಕ್ಷಗಳು ಲೋಕಸಭಾ ಚುನಾವಣೆಯನ್ನು ಜಿಹಾದಿಗಳ ಬೆಂಬಲದೊಂದಿಗೆ ಎದುರಿಸುತ್ತಿವೆ ಎಂದು ಆರೋಪಿಸಿದೆ. ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ‘ನಾವು ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಪರಿಗಣಿಸಿದರೆ ಅವರು ಜಿಹಾದ್ ಎಂದು ಪರಿಗಣಿಸುತ್ತಾರೆ. ನಾವು ಜನರೊಂದಿಗಿದ್ದರೆ ಅವರು ಜಿಹಾದಿಗಳೊಂದಿಗಿದ್ದಾರೆ. ಅದು ಅವರ ಹೇಳಿಕೆಯಲ್ಲೇ ಇದೆ. ಚುನಾವಣೆಗಳನ್ನು ಜಿಹಾದಿ ಮನಃಸ್ಥಿತಿಯೊಂದಿಗೆ ಹೋರಾಡಲಾಗುತ್ತಿದೆ’ ಎಂದು ಟೀಕಿಸಿದರು. ಆಲಂ ಅವರ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.