ಠಾಣೆ: ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಸಮಾಜವಾದಿ ಪಕ್ಷದ ಶಾಸಕ ರಯೀಸ್ ಶೇಖ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಪತ್ರ ಬರೆದಿದ್ದಾರೆ.
ಠಾಣೆ ಜಿಲ್ಲೆಯ ಭೀವಂಡಿ ಕ್ಷೇತ್ರದ ಶಾಸಕ ರಯೀಸ್ ಅವರು ತಾವು ಬರೆದ ಪತ್ರವನ್ನು ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
‘ಮರಾಠ ಸಮುದಾಯಕ್ಕೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿ ಇದೇ ವಾರ ಮಹಾರಾಷ್ಟ್ರ ವಿಧಾನಸಭೆ ಮಹತ್ವದ ನಿರ್ಧಾರ ಕೈಗೊಂಡಿತ್ತು. ಈ ಮಸೂದೆಯು ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿತ್ತು. ಕಾಂಗ್ರೆಸ್–ಎನ್‌ಸಿಪಿ ಮೈತ್ರಿ ಸರ್ಕಾರವು ಮುಸ್ಲಿಂ ಅಭ್ಯರ್ಥಿಗಳಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸಿ ಆದೇಶಿಸಿತ್ತು. ಬಾಂಬೆ ಹೈಕೋರ್ಟ್ ಕೂಡಾ ಇದನ್ನು ಎತ್ತಿ ಹಿಡಿದಿತ್ತು. ಆದರೆ ಇದು ಕಾನೂನಾಗಿ ಬದಲಾಗಲಿಲ್ಲ’ ಎಂದು ಶೇಖ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
‘ಸಮುದಾಯದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಈ ಮೀಸಲಾತಿ ನೀಡುವಂತೆ ಆಗ್ರಹಿಸಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ಸುಮಾರು 50 ಉಪಜಾತಿಗಳಿವೆ. ಇವರಿಗೆ ಮೀಸಲಾಯಿತಿಂದ ಅನುಕೂಲವಾಗಲಿದೆ’ ಎಂದು ಶೇಖ್ ಹೇಳಿದ್ದಾರೆ.
‘ಮರಾಠ ಸಮುದಾಯಕ್ಕೆ ಮೀಸಲಾತಿ ಕೊಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿಯನ್ನು ಬದಲಿಸಬಾರದು. ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಶೇ 11.5ರಷ್ಟಿದೆ ಎಂದು 2006ರಲ್ಲಿ ನ್ಯಾ. ರಾಜೇಂದ್ರ ಸಾಚರ್ ಆಯೋಗ ಹಾಗೂ 2004ರ ನ್ಯಾ. ರಂಗನಾಥ ಮಿಶ್ರಾ ಆಯೋಗಗಳ ವರದಿಯಲ್ಲಿ ಹೇಳಲಾಗಿದೆ. ಜತೆಗೆ ಈ ಸಮುದಾಯವು ಹಿಂದುಳಿದಿದೆ ಎಂದು ಉಲ್ಲೇಖಿಸಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.