ADVERTISEMENT

ಲೋಕಸಭೆ ಚುನಾವಣೆ: ಉತ್ತರಪ್ರದೇಶದಲ್ಲಿ ಎಸ್‌ಪಿ–ಆರ್‌ಎಲ್‌ಡಿ ಮೈತ್ರಿ 

ಪಿಟಿಐ
Published 19 ಜನವರಿ 2024, 15:33 IST
Last Updated 19 ಜನವರಿ 2024, 15:33 IST
ಅಖಿಲೇಶ್ ಯಾದವ್‌
ಅಖಿಲೇಶ್ ಯಾದವ್‌   

ಲಖನೌ: ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ) ಹಾಗೂ ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ) ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.

ರಾಜ್ಯದ ಪಶ್ಚಿಮ ಭಾಗದ ಏಳು ಕ್ಷೇತ್ರಗಳಲ್ಲಿ ಆರ್‌ಎಲ್‌ಡಿ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಒಪ್ಪಿಗೆ ನೀಡಿದ್ದಾರೆ. ಉಭಯ ಪಕ್ಷಗಳ ಮೈತ್ರಿ ಕುರಿತಂತೆ ಅಖಿಲೇಶ್‌ ಯಾದವ್‌ ಹಾಗೂ ಆರ್‌ಎಲ್‌ಡಿ ನಾಯಕ ಜಯಂತ್‌ ಚೌಧರಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

‘ಆರ್‌ಎಲ್‌ಡಿ ಮತ್ತು ಎಸ್‌ಪಿ ಪಕ್ಷಗಳ ಮೈತ್ರಿಗಾಗಿ ಸಹಕರಿಸಿದ ಎರಡೂ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಹಾಗೂ ನಾಯಕರಿಗೆ ಅಭಿನಂದನೆಗಳು. ವಿಜಯಕ್ಕಾಗಿ ನಾವೆಲ್ಲರೂ ಒಂದಾಗೋಣ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಯಾದವ್ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಪಕ್ಷವು ಸದಾಕಾಲ ಸಿದ್ಧವಿದೆ. ಮೈತ್ರಿಕೂಟದ ಎಲ್ಲಾ ಕಾರ್ಯಕರ್ತರು ರಾಜ್ಯದ ಅಭಿವೃದ್ಧಿಗಾಗಿ  ಒಂದಾಗಿ ಮುನ್ನಡೆಯಬೇಕೆಂದು ನಾವು ನಿರೀಕ್ಷಿಸುತ್ತೇವೆ’ ಎಂದು ಚೌಧರಿ ಟ್ವೀಟ್‌ ಮಾಡಿದ್ದಾರೆ. 

ಪ್ರಬಲ ಜಾಟ್‌ ಸಮುದಾಯವು ಆರ್‌ಎಲ್‌ಡಿಯ ಪ್ರಮುಖ ಮತ ಬ್ಯಾಂಕ್‌ ಆಗಿದ್ದು, ಆ ಸಮುದಾಯದವರೇ ಹೆಚ್ಚಿನ ಜನಸಂಖ್ಯೆ ಇರುವ ಮುಜಾಫರ್‌ನಗರ, ಮಥುರಾ, ಬಾಗ್‌ಪತ್, ಮೀರತ್ ಸೇರಿದಂತೆ ಪಶ್ಚಿಮ ಭಾಗದ ಕ್ಷೇತ್ರಗಳಲ್ಲಿ ಆರ್‌ಎಲ್‌ಡಿ ಕಣಕ್ಕೆ ಇಳಿಯಲಿದೆ. 

2019ರ ಲೋಕಸಭೆ ಚುನಾವಣೆಯಲ್ಲಿ ಆರ್‌ಎಲ್‌ಡಿಯು ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದ ಭಾಗವಾಗಿತ್ತು. ಈ ಚುನಾವಣೆಯಲ್ಲಿ ಬಿಎಸ್‌ಪಿ 10, ಎಸ್‌ಪಿ 5 ಕ್ಷೇತ್ರಗಳಲ್ಲಿ ಗೆದ್ದರೇ, ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆರ್‌ಎಲ್‌ಡಿ ಶೂನ್ಯ ಸಂಪಾದಿಸಿತ್ತು.  

2022ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ–ಆರ್‌ಎಲ್‌ಡಿ ಜೊತೆಯಾಗಿ ಸ್ಪರ್ಧಿಸಿದ್ದವು. ಎಸ್‌ಪಿ 111 ಕ್ಷೇತ್ರಗಳಲ್ಲಿ ಗೆದ್ದರೆ, ಆರ್‌ಎಲ್‌ಡಿ 8 ಸ್ಥಾನಗಳಲ್ಲಿ ಜಯ ದಾಖಲಿಸಿತ್ತು. 

ಬರುವ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಉತ್ತರಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.