ಬಂದಾ: ನಾಲ್ಕು ತಿಂಗಳ ಮಗುವನ್ನು ಕೊಂದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಮಹಿಳೆಗೆ ಸೆ. 20ರ ನಂತರ ಅಬುಧಾಬಿ ಸರ್ಕಾರ ಗಲ್ಲಿಗೇರಿಸಲು ನಿರ್ಧರಿಸಿದೆ. ಇದನ್ನು ತಪ್ಪಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಧ್ಯಪ್ರವೇಶಕ್ಕೆ ಸಮಾಜವಾದಿ ಪಕ್ಷ ಆಗ್ರಹಿಸಿದೆ.
ಅಬುಧಾಬಿ ದೊರೆ ಶೇಖ್ ಖಲೆದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಅಲ್ಲಿನ ಜೈಲಿನಲ್ಲಿ ಹಲವು ವರ್ಷಗಳಿಂದ ಬಂದಿಯಾಗಿರುವ ಉತ್ತರ ಪ್ರದೇಶ ಮೂಲದ 29 ವರ್ಷದ ಶಹಝಾದಿ ಬಿಡುಗಡೆ ಕುರಿತು ಮಾತುಕತೆ ನಡೆಸಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡರು ಆಗ್ರಹಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ಶಹಝಾದಿ ಎಂಬ ಮಹಿಳೆ ಮುಗ್ದೆ ಹಾಗೂ ನಿರಪರಾಧಿಯಾಗಿದ್ದಾರೆ. ಅವರನ್ನು ಮರಣದಂಡನೆಯಿಂದ ಮುಕ್ತಗೊಳಿಸಲು ಅವರ ತಂದೆ ಶಬ್ಬೀರ್ ಅವರು ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ‘ರೋಟಿ ಬ್ಯಾಂಕ್ ಬಂದಾ’ ಎಂಬ ಸಂಸ್ಥೆಯಲ್ಲಿ ಶಹಝಾದಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಫೇಸ್‌ಬುಕ್ ಮೂಲಕ ಆಗ್ರ ಮೂಲದ ಉಝೇರ್ ಅವರ ಸ್ನೇಹ ಬೆಳೆಸಿದರು. ಬಾಲ್ಯದಲ್ಲಿ ಮುಖದ ಮೇಲಾಗಿದ್ದ ಸುಟ್ಟ ಗಾಯಕ್ಕೆ ಚಿಕಿತ್ಸೆ ಪಡೆಯುವ ಸುಲುವಾಗಿ 2021ರಲ್ಲಿ ಶಹಝಾದಿ ಅವರನ್ನು ಉಝೇರ್ ದುಬೈಗೆ ಕಳುಹಿಸಿದ್ದ. ಅಲ್ಲಿ ಉಝೈರ್ ಸಂಬಂಧಿಕರು ನೆಲೆಸಿದ್ದರು.
ಇದೇ ಸಂದರ್ಭದಲ್ಲಿ ಉಜೈರ್ ಅವರ ಚಿಕ್ಕಮ್ಮ ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು 4 ತಿಂಗಳು ಇರುವಾಗಿ ಮೃತಪಟ್ಟಿತ್ತು. ಮಗುವಿನ ಸಾವು ಶಹಝಾದಿ ಮಾಡಿದ್ದು ಎಂದು ಆರೋಪಿಸಲಾಗಿತ್ತು. ಹೀಗಾಗಿ ಆಕೆಯನ್ನು ಬಂಧಿಸಲಾಗಿತ್ತು. ಜತೆಗೆ ಆರೋಪ ಸಾಬೀತಾಗಿದ್ದರಿಂದ ಗಲ್ಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.