ಲಖನೌ: ಸಮಾಜವಾದಿ ಪಕ್ಷ ನಾಯಕ ಅಖಿಲೇಶ್ ಯಾದವ್ ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ಕಾರ್ಯಕರ್ತರು 'ಟೊಮೆಟೊ' ಆಕಾರದ ಕೇಕ್ ಕತ್ತರಿಸಿದ್ದಾರೆ. ಆ ಮೂಲಕ ಟೊಮೆಟೊ ಬೆಲೆ ಏರಿಕೆಯ ಬಗ್ಗೆ ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ವಾರಣಾಸಿಯ ರೊಹಾನಿಯಾದ ಪೀರ್ ಗೋವರ್ಧನಪುರದಲ್ಲಿ ಹುಟ್ಟುಹಬ್ಬದ ಸಮಾರಂಭವನ್ನು ಕಾರ್ಯಕರ್ತರು ಹಮ್ಮಿಕೊಂಡಿದ್ದರು.
'ಯಾವಾಗಲೂ ನಮ್ಮ ನಾಯಕನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವು. ಆದರೆ ಈ ಬಾರಿ ಬೆಲೆ ಏರಿಕೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆ ಪಕ್ಷ ಸಿಹಿಯನ್ನಾದರೂ ಹಂಚಬಹುದಿತ್ತು. ಆದರೆ ಏನು ಮಾಡುವುದು ಸಿಹಿ ತಿಂಡಿಗಳ ಬೆಲೆ ಕೂಡ ಗಗನಕ್ಕೇರಿದೆ. ಟೊಮೆಟೊ ಕೆಜಿಗೆ ₹120 ದಾಟಿದೆ. ನಮ್ಮ ಹಳ್ಳಿಗಳಲ್ಲಿ ಟೊಮೆಟೊ ಚಟ್ನಿಯೊಂದಿಗೆ ಚಪಾತಿ ತಿನ್ನುತ್ತಿದ್ದೇವು. ನಮ್ಮ ತಟ್ಟೆಯಿಂದ ಅದನ್ನು ಕಿತ್ತುಕೊಳ್ಳಲಾಗುತ್ತಿದೆ' ಎಂದು ಪಕ್ಷದ ಕಾರ್ಯಕರ್ತ ಅಜಯ್ ಫೌಜಿ ಹೇಳಿದರು.
'ಈ ಬಾರಿ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದು, ಸಿಹಿ ಬದಲು ಟೊಮೆಟೊವನ್ನು ವಿತರಿಸಿದ್ದೇವೆ. ಅಲ್ಲದೇ ಟೊಮೆಟೊ ಆಕಾರದ ಕೇಕ್ ಅನ್ನು ಕತ್ತರಿಸಿದ್ದೇವೆ. 50ರಿಂದ 60 ಕುಟುಂಬಗಳಿಗೆ 250 ಗ್ರಾಂ ಟೊಮೆಟೊ ವಿತರಿಸಲಾಗಿದೆ' ಎಂದರು.
ಅಮೇಥಿಯಲ್ಲಿ ಕಾರ್ಯಕರ್ತರು ಪಕ್ಷದ ನಾಯಕನಿಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದಾರೆ. ಭತ್ತದ ಸಸಿಗಳನ್ನು ಬಳಸಿಕೊಂಡು ನೀರಾವರಿ ಭೂಮಿಯಲ್ಲಿ 'ಹ್ಯಾಪಿ ಬರ್ತಡೆ ಅಖಿಲೇಶ್ ಜೀ' ಎಂದು ಬರೆದು ಶುಭಾಶಯ ಕೋರಿದ್ದಾರೆ.
ಅಖಿಲೇಶ್ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ಶುಭಾಶಯ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮಗನಾಗಿ ಜನಿಸಿರುವ ಅಖಿಲೇಶ್ ಯಾದವ್, ಪ್ರಸ್ತುತ ಉತ್ತರ ಪ್ರದೇಶದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾಲ್ಕು ಬಾರಿ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.