ADVERTISEMENT

ಮುಕ್ತ ಚರ್ಚೆಗೆ ಸಿಗದ ಅವಕಾಶ: ಆರ್ಥಿಕ ತಜ್ಞ ಅಮರ್ಥ್ಯ ಸೇನ್‌ ವಿಷಾದ

ಕೇಂದ್ರ ಸರ್ಕಾರದ ನಿಲುವುಗಳಿಗೆ ವಿರೋಧ: ರೈತರ ಪ್ರತಿಭಟನೆಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 11:10 IST
Last Updated 28 ಡಿಸೆಂಬರ್ 2020, 11:10 IST
ಅಮರ್ಥ್ಯ ಸೇನ್‌
ಅಮರ್ಥ್ಯ ಸೇನ್‌   

ಕೋಲ್ಕತ್ತ: ದೇಶದಲ್ಲಿ ಮುಕ್ತವಾಗಿ ಚರ್ಚಿಸುವ ಅವಕಾಶ ಮತ್ತು ವಿರೋಧ ವ್ಯಕ್ತಪಡಿಸುವ ವಾತಾವರಣವೇ ಕಡಿಮೆಯಾಗುತ್ತಿದೆ ಎಂದು ಆರ್ಥಿಕ ತಜ್ಞ ಅಮರ್ಥ್ಯ ಸೇನ್‌ ಹೇಳಿದ್ದಾರೆ.

ಸಮರ್ಪಕ ಕಾರಣಗಳಿಲ್ಲದೆಯೇ ದೇಶದ್ರೋಹದ ಆರೋಪ ಹೊರಿಸಿ, ವಿಚಾರಣೆ ಮಾಡದೆ ಜನರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ’ಈ ಕಾಯ್ದೆಗಳನ್ನು ಪುನರ್‌ವಿಮರ್ಶೆಗೆ ಒಳಪಡಿಸಲು ಬಲವಾದ ಕಾರಣಗಳಿವೆ’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

ಸರ್ಕಾರ ಇಚ್ಛೆಪಡದ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಬಹುದು ಮತ್ತು ಜೈಲಿಗೆ ಕಳುಹಿಸಬಹುದು. ಸಾರ್ವಜನಿಕರ ಪ್ರತಿಭಟನೆ ಮತ್ತು ಮುಕ್ತ ಚರ್ಚೆ ನಡೆಯದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಅಥವಾ ಅವಕಾಶವನ್ನೇ ಕಡಿಮೆ ಮಾಡಲಾಗುತ್ತಿದೆ’ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಯುವ ನಾಯಕರಾದ ಕನ್ಹಯ್ಯಾ ಕುಮಾರ್‌, ಶೇಹ್ಲಾ ರಶೀದ್‌ ಮತ್ತು ಉಮರ್‌ ಖಲೀದ್‌ ಅವರನ್ನು ಶತ್ರುಗಳಂತೆ ಕಾಣಲಾಗಿದೆ. ದೂರದೃಷ್ಟಿ ಹೊಂದಿದ್ದ ಈ ಯುವ ನಾಯಕರು ಶಾಂತಿ ಮತ್ತು ಅಹಿಂಸಾ ತತ್ವದ ಅಡಿಯಲ್ಲಿ ಹೋರಾಟ ನಡೆಸುತ್ತಿದ್ದರು. ಇವರು ರಾಜಕೀಯ ಕ್ಷೇತ್ರದ ಆಸ್ತಿ ಎಂದು ಪರಿಗಣಿಸಬೇಕಾಗಿತ್ತು. ಬಡವರ ಪರ ಯೋಜನೆಗಳನ್ನು ರೂಪಿಸಲು ಇವರಿಗೆ ಅವಕಾಶ ನೀಡಬೇಕಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ರೀತಿಯಲ್ಲಿ ಸರ್ಕಾರ ತಪ್ಪು ಮಾಡಿದಾಗ ದನಿ ಎತ್ತಲೇಬೇಕು. ಇದು ಪ್ರಜಾಪ್ರಭುತ್ವದ ಲಕ್ಷಣ ಎಂದು ಅವರು ಹೇಳಿದ್ದಾರೆ.

ಕೋವಿಡ್‌–19 ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿರುವ ಅವರು, ‘ಯಾವುದೇ ರೀತಿ ಸೂಚನೆ ನೀಡದೆ ಲಾಕ್‌ಡೌನ್‌ ಹೇರಿದ್ದು ತಪ್ಪು. ಬಡ ಕಾರ್ಮಿಕರನ್ನು ಕಡೆಗಣಿಸಿದ್ದು ಸಹ ತಪ್ಪು. ಕೋವಿಡ್‌–19 ಅನ್ನು ಇನ್ನೂ ಹೆಚ್ಚು ಜಾಣತನ ಮತ್ತು ಮಾನವೀಯ ಸ್ಪರ್ಶದಿಂದ ನಿಯಂತ್ರಿಸಬೇಕಾಗಿದೆ’ ಎಂದು ಹೇಳಿದ್ದಾರೆ.

ಅಮರ್ಥ್ಯ ಸೇನ್‌ ಅವರ ಆರೋಪಗಳು ಆಧಾರರಹಿತವಾಗಿವೆ ಎಂದು ಬಿಜೆಪಿ ಹೇಳಿದೆ.

‘ಅಸಹಿಷ್ಣುತೆ ಅಂದರೆ ಏನು ಎನ್ನುವುದನ್ನು ನೋಡಬೇಕಾದರೆ ಅಮರ್ಥ್ಯ ಸೇನ್‌ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿ. ಈ ರಾಜ್ಯದಲ್ಲಿ ವಿರೋಧ ಪಕ್ಷಗಳು ತಮ್ಮ ಕಾರ್ಯಕ್ರಮಗಳನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಆಯೋಜಿಸಲು ಅವಕಾಶವೇ ಇಲ್ಲದಂತಾಗಿದೆ’ ಎಂದು ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.