ಬೆಂಗಳೂರು: ದೇಶದ ಜಿಸ್ಯಾಟ್–ಎನ್2 ನೂತನ ಸಂವಹನ ಉಪಗ್ರಹವನ್ನು ಅಮೆರಿಕದ ಶತಕೋಟ್ಯಧಿಪತಿ ಎಲಾನ್ ಮಸ್ಕ್ ಸ್ಥಾಪಿಸಿರುವ ‘ಸ್ಪೇಸ್‌ಎಕ್ಸ್’ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಅಮೆರಿಕದ ಕೇಪ್ ಕೆನವೆರಲ್‌ನ ‘ಸ್ಪೇಸ್‌ಎಕ್ಸ್’ನಿಂದ ಉಡಾವಣೆ ಮಾಡಲಾಯಿತು. ಈ ಸಂವಹನ ಉಪಗ್ರಹವು ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳು ಹಾಗೂ ವಿಮಾನದಲ್ಲಿ ಸಂಪರ್ಕ ವ್ಯವಸ್ಥೆಯನ್ನು (ಇನ್–ಫ್ಲೈಟ್ ಕನೆಕ್ಟಿವಿಟಿ) ಹೆಚ್ಚಿಸಲಿದೆ ಎಂದು ಇಸ್ರೊದ ವಾಣಿಜ್ಯ ವಿಭಾಗದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ತಿಳಿಸಿದೆ.
ಈ ಉಪಗ್ರಹವು ಇಸ್ರೊದಲ್ಲಿರುವ ಸದ್ಯದ ಉಡಾವಣಾ ರಾಕೆಟ್‌ನ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕವಿದ್ದ ಕಾರಣ ವಿದೇಶಿ ಉಡಾವಣಾ ರಾಕೆಟ್ ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂದು ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಇಸ್ರೊದ ಮಾಜಿ ಅಧ್ಯಕ್ಷರು ತಿಳಿಸಿದ್ದಾರೆ.
‘ಉಪಗ್ರಹವು ಇಸ್ರೊದ ಉಡಾವಣಾ ರಾಕೆಟ್ ಸಾಮರ್ಥ್ಯಕ್ಕಿಂತ ಹೆಚ್ಚು ತೂಕವಿತ್ತು. ಹೀಗಾಗಿ ದೇಶದ ಹೊರಗೆ ಉಡಾವಣೆ ಮಾಡಬೇಕಾಯಿತು’ ಎಂದು ಇಸ್ರೊ ಮಾಜಿ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
‘ಎನ್‌ಎಸ್‌ಐಎಲ್‌ನ ಜಿಸ್ಯಾಟ್–ಎನ್2 ಉತ್ಕೃಷ್ಟ (ಎಚ್‌ಟಿಎಸ್) ಸಂವಹನ ಉಪಗ್ರಹವನ್ನು ನ.19ರಂದು ಅಮೆರಿಕದ ಕೇಪ್ ಕೆನವೆರಲ್‌ನಿಂದ ಯಶಸ್ವಿಯಾಗಿ ಉಡಾಯಿಸಲಾಗಿದೆ. 4,400 ಕೆ.ಜಿ ತೂಕವಿರುವ ಈ ಉಪಗ್ರಹವನ್ನು ಫಾಲ್ಕನ್ 9 ರಾಕೆಟ್ ಮೂಲಕ ನಿಗದಿತ ಭೂಸ್ಥಿರ ವರ್ಗಾವಣೆ ಕಕ್ಷೆಗೆ (ಜಿಟಿಒ) ಸೇರಿಸಲಾಗಿದೆ. ಇಸ್ರೊದ ಮುಖ್ಯ ನಿಯಂತ್ರಣಾ ವ್ಯವಸ್ಥೆ (ಎಂಸಿಎಫ್) ಉಪಗ್ರಹವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಪ್ರಾಥಮಿಕ ಅಂಕಿಅಂಶಗಳ ಪ್ರಕಾರ ಉಪಗ್ರಹ ಉತ್ತಮ ಸ್ಥಿತಿಯಲ್ಲಿದೆ’ ಎಂದು ‘ಎಕ್ಸ್’ನಲ್ಲಿ ಎನ್‌ಎಸ್‌ಐಎಲ್ ತಿಳಿಸಿದೆ.
ಇದು ಕೆಎ–ಬ್ಯಾಂಡ್ ಉತ್ಕೃಷ್ಟ ಸಂವಹನ ಉಪಗ್ರಹವಾಗಿದ್ದು, ಬ್ರಾಡ್‌ಬ್ಯಾಂಡ್ ಸೇವೆಗಳು ಮತ್ತು ವಿಮಾನದಲ್ಲಿನ (ಇನ್–ಫ್ಲೈಟ್) ಸಂಪರ್ಕ ವ್ಯವಸ್ಥೆಗಳನ್ನು ಹೆಚ್ಚಿಸಲಿದೆ ಎಂದು ಎನ್‌ಎಸ್‌ಐಎಲ್ ತಿಳಿಸಿದೆ.
ಇದೇ ಸರಣಿಯ ಎನ್‌ಐಎಲ್‌ನ ಜಿಸ್ಯಾಟ್–24 ಉಪಗ್ರಹವವನ್ನು 2022ರ ಜೂ.23ರಂದು ಫ್ರೆಂಚ್ ಗಯಾನಾ ಕೌರೌನಿಂದ ಉಡಾಯಿಸಲಾಗಿತ್ತು ಎಂದು ಎನ್‌ಎಸ್‌ಐಎಲ್ ತಿಳಿಸಿದೆ.
ಹೊಸ ಉಪಗ್ರಹದ ಜೀವಿತಾವಧಿ 14 ವರ್ಷವಾಗಿದ್ದು, 32 ಬಳಕೆದಾರ ಕಿರಣಗಳ ವ್ಯವಸ್ಥೆ ಹೊಂದಿದೆ. ಇದರ ಪೇಲೋಡ್‌ನಲ್ಲಿ ಮೂರು ಪ್ಯಾರಾಬೋಲಿಕ್ (ಪಾತ್ರೆಯಾಕಾರ)ದ 2.5-ಮೀಟರ್ ಸಂಯೋಜನಾ ಪ್ರತಿಫಲಕಗಳು ಇವೆ.
ಇಸ್ರೊದ ಉಡಾವಣಾ ಸಾಮರ್ಥ್ಯ ವೃದ್ಧಿಗೆ ಯೋಜನೆ
ಇಸ್ರೊಗೆ 4 ಟನ್ ತೂಕದ ಉಪಗ್ರಹ ಉಡಾಯಿಸುವ ಸಾಮರ್ಥ್ಯವಿದೆ. ಆದರೆ ಈ ಹೊಸ ಉಪಗ್ರಹ 4.7 ಟನ್ ಇದೆ. ಇದೀಗ ಇಸ್ರೊದ ಉಡಾವಣಾ ಸಾಮರ್ಥ್ಯ ವೃದ್ಧಿಗೆ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಶಿವನ್ ತಿಳಿಸಿದ್ದಾರೆ. ‘ಇಸ್ರೊ ಮುಂದಿನ ದಿನಗಳಲ್ಲಿ ಉಡಾವಣಾ ರಾಕೆಟ್‌ಗಳ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಅಲ್ಲಿಯವರೆಗೆ ಕಾಯುವುದು ಸಾಧ್ಯವಿಲ್ಲದ ಕಾರಣ ಸ್ಪೇಸ್‌ಎಕ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.