ನವದೆಹಲಿ: ಕೇಂದ್ರ ಸರ್ಕಾರವು ಇದೇ ಸೆ. 18ರಿಂದ 22ರವರೆಗೆ ವಿಶೇಷ ಸಂಸತ್ ಅಧಿವೇಶನ ನಡೆಸುವುದಾಗಿ ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ವಿಶೇಷ ಅಧಿವೇಶನ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಈ ವಿಶೇಷ ಅಧಿವೇಶನದ ಉದ್ದೇಶ, ಚರ್ಚೆಯ ವಿಷಯಗಳ ಕುರಿತು ಅವರು ಯಾವುದೇ ಮಾಹಿತಿ ನೀಡಿಲ್ಲ.
ಹಾಗಿದ್ದರೆ ಹೀಗೆ ವಿಶೇಷ ಅಧಿವೇಶನ ಕರೆದಿದ್ದು ಇದೇ ಮೊದಲೇ...?
ಲೋಕಸಭೆ ಮತ್ತು ರಾಜ್ಯಸಭೆಯ ವಿಶೇಷ ಅಧಿವೇಶನ ನಡೆಯುತ್ತಿರುವುದು ಹೊಸತಲ್ಲ. ಈ ಹಿಂದೆಯೂ ನಡೆದ ಉದಾಹರಣೆಗಳಿವೆ. ಅವುಗಳು ಆಯಾ ಸಂದರ್ಭಕ್ಕೆ ಅನುಸಾರವಾಗಿ ನಡೆದ ಉದಾಹರಣೆಗಳಿವೆ.
ಇದನ್ನೂ ಓದಿ: ಸೆಪ್ಟೆಂಬರ್ 18 ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ: ಪ್ರಲ್ಹಾದ್ ಜೋಶಿ
ಭಾರತದ ಸ್ವಾತಂತ್ರ್ಯ ಸಿಗುವ ಅವಧಿಯಲ್ಲಿ 1947ರ ಆಗಸ್ಟ್ 14 ಹಾಗೂ 15ರಂದು ವಿಶೇಷ ಸಂಸತ್ ಅಧಿವೇಶನ ಕರೆಯಲಾಗಿತ್ತು.
1962ರಲ್ಲಿ ನಡೆದ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ನ. 8 ಹಾಗೂ 9ರಂದು ವಿಶೇಷ ಅಧಿವೇಶನವನ್ನು ಪ್ರಧಾನಿ ಜವಾಹರಲಾಲ್ ಅವರ ನೇತೃತ್ವದಲ್ಲಿ ಕರೆಯಲಾಗಿತ್ತು. ಇದರಲ್ಲಿ ಭಾರತದ ಗಡಿಯಲ್ಲಿ ಚೀನಾ ಪಡೆಗಳು ನುಸುಳಿರುವ ಕುರಿತು ಚರ್ಚೆ ನಡೆದಿತ್ತು.
1972ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯೋತ್ಸವದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ವಿಶೇಷ ಅಧಿವೇಶನ ನಡೆದಿತ್ತು.
‘ಭಾರತ ಬಿಟ್ಟು ತೊಲಗಿ’ ಚಳವಳಿಯ 50ನೇ ವರ್ಷಾಚರಣೆಯ ನೆನಪಿಗೆ 1997ರ ಆ. 15ರಂದು ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯಲಾಗಿತ್ತು.
2017ರ ಜೂನ್ 30ರಂದು ಜಿಎಸ್‌ಟಿ ಜಾರಿಗೆ ಸಂಬಂಧಿಸಿದಂತೆ ಲೋಕಸಭೆ ಮತ್ತು ರಾಜ್ಯ ಸಭೆಗಳ ಜಂಟಿ ಅಧಿವೇಶನವನ್ನು ಮಧ್ಯರಾತ್ರಿ ಕರೆಯಲಾಗಿತ್ತು. ಮಸೂದೆಯೊಂದರ ಕುರಿತು ಸಂಸತ್ತಿನಲ್ಲಿ ನಡೆದ ಮೊದಲ ವಿಶೇಷ ಅಧಿವೇಶನ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.