ADVERTISEMENT

Video: ಸ್ಪೈಸ್‌ಜೆಟ್‌ ವಿಮಾನದಲ್ಲಿ ತಲ್ಲಣ; ಪ್ರಯಾಣಿಕರ ತಲೆಯ ಮೇಲೆ ಬಿದ್ದ ಲಗೇಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 7:57 IST
Last Updated 2 ಮೇ 2022, 7:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುರ್ಗಾಪುರ: ಭಾನುವಾರ ಸಂಜೆ ಸ್ಪೈಸ್‌ಜೆಟ್‌ ಸಂಸ್ಥೆಯ ವಿಮಾನವೊಂದು ಇಳಿಯುವ ವೇಳೆ ಉಂಟಾದ ತಾಂತ್ರಿಕ ದೋಷದಿಂದ ವಿಮಾನದೊಳಗೆ ಒತ್ತಡದ ಸ್ಥಿತಿ ನಿರ್ಮಾಣವಾಗಿತ್ತು. ಅಲುಗಾಟ ಹೆಚ್ಚಿದ ಕಾರಣದಿಂದ ಕ್ಯಾಬಿನ್‌ನ ಲಗೇಜ್‌ಗಳು ಪ್ರಯಾಣಿಕರ ತಲೆಯ ಮೇಲೆ ಬಿದ್ದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದರ ವಿಡಿಯೊಗಳು ಹರಿದಾಡುತ್ತಿವೆ.

ವಿಡಿಯೊದಲ್ಲಿ ಪ್ರಯಾಣಿಕರ ಗಾಬರಿ, ಕೂಗಾಟ, ಪ್ರಾರ್ಥನೆ, ಸಿಬ್ಬಂದಿ ಸಮಾಧಾನ ಪಡಿಸುವ ಪ್ರಯತ್ನ, ಇಳಿ ಬಿದ್ದ ಆಕ್ಸಿಜನ್‌ ಮಾಸ್ಕ್‌ಗಳನ್ನು ಕಾಣಬಹುದಾಗಿದೆ.

ಪಶ್ಚಿಮ ಬಂಗಾಳದ ದುರ್ಗಾಪುರದ ಕಾಝಿ ನಝರುಲ್‌ ಇಸ್ಲಾಮ್‌ ನಿಲ್ದಾಣದಲ್ಲಿ ಸ್ಪೈಸ್‌ಜೆಟ್‌ನ ಎಸ್‌ಜಿ–945 ವಿಮಾನ ಇಳಿಯುವಾಗ ಎದುರಾದ ಬಿರುಗಾಳಿಯ ಪರಿಣಾಮದಿಂದ ಪ್ರಕ್ಷುಬ್ಧ ಸ್ಥಿತಿ ಉಂಟಾಗಿತ್ತು. ವಿಮಾನದೊಳಗಿನ ತಲ್ಲಣದ ಸ್ಥಿತಿಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ADVERTISEMENT

ಮುಂಬೈ–ದುರ್ಗಾಪುರ ನಡುವಣ, ಸ್ಪೈಸ್‌ಜೆಟ್‌ ಸಂಸ್ಥೆಯ ಬೋಯಿಂಗ್‌ ಬಿ737 ಮ್ಯಾಕ್ಸ್‌ ವಿಮಾನದಲ್ಲಿ ತೀವ್ರವಾದ ಒತ್ತಡ ಸ್ಥಿತಿ ನಿರ್ಮಾಣವಾಗಿತ್ತು. ಕನಿಷ್ಠ 40 ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದ್ದು, 10 ಮಂದಿಯ ತಲೆ ಮತ್ತು ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ.

ವಿಮಾನ ಇಳಿಯುವುದಕ್ಕೂ ಮುನ್ನ ಮೂರು ಬಾರಿ ದೊಡ್ಡ ಪ್ರಮಾಣದಲ್ಲಿ ಕುಲುಕಾಡಿದೆ. ಅದರ ಪರಿಣಾಮ, ಪ್ರಯಾಣಿಕರು ಧರಿಸಿದ್ದ ಸೀಟ್‌ ಬೆಲ್ಟ್‌ಗಳು ಹರಿದು ಹೋಗಿವೆ. ಸೀಟ್‌ಗಳ ಹಿಂದೆ ಮುಂದಕ್ಕೆ ಎಗರಿ ಬಿದ್ದಂತಾಗಿದೆ. ಈ ನಡುವೆ ಕ್ಯಾಬಿನ್‌ನಲ್ಲಿದ್ದ ಲಗೇಜ್‌ಗಳು ಹಲವು ಪ್ರಯಾಣಿಕರ ತಲೆಯ ಮೇಲೆ ಬಿದ್ದು ಘಾಸಿಗೊಳಿಸಿದವು ಎಂದು ಪ್ರಯಾಣಿಕರೊಬ್ಬರ ಅನುಭವವನ್ನು ಇಂಡಿಯಾ ಟುಡೆ ವರದಿ ಮಾಡಿದೆ.

ಬಿರುಗಾಳಿಯ ಬಗ್ಗೆ ವಿಮಾನದ ಪೈಲಟ್‌ಗೆ ಮಾಹಿತಿ ರವಾನಿಸಲಾಗಿತ್ತೇ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಘಟನೆಯ ಬಗ್ಗೆ ತನಿಖೆ ಮುಂದುವರಿದಿದೆ.

ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ 8 ಮಂದಿ ಮನೆಗೆ ಮರಳಿದ್ದಾರೆ ಎಂದು ಸ್ಪೈಸ್‌ಜೆಟ್‌ ವಕ್ತಾರರು ಹೇಳಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.