ಮುಂಬೈ: ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು ಒಂದು ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿಲು ಮುಂದಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
‘ಆರ್ಥಿಕ ಮುಗ್ಗಟ್ಟು, ಮೇಲಿಂದ ಮೇಲೆ ಎದುರಾದ ಕಾನೂನು ತೊಂದರೆಗಳು, ಸೇವೆಯಲ್ಲಿರುವ ವಿಮಾನಗಳ ಸಂಖ್ಯೆಯನ್ನು ಪರಿಗಣಿಸಿ ಹೆಚ್ಚುವರಿ ಸಿಬ್ಬಂದಿ ವಜಾಗೊಳಿಸಲು ಯೋಜಿಸಿದೆ. ಈ ಕುರಿತು ಈ ವಾರ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಸ್ಪೈಸ್‌ಜೆಟ್ ವಿಮಾನ ಸಂಸ್ಥೆಯ ವಕ್ತಾರರು ಮಾತನಾಡಿ, ‘ವಿಮಾನಯಾನ ಸಂಸ್ಥೆಯು ವೆಚ್ಚ ಕಡಿಮೆ ಮಾಡಿ, ಲಾಭ ಗಳಿಸಲು ಹಲವು ಕ್ರಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ’ ಎಂದರು.
ಸಂಸ್ಥೆಯಲ್ಲಿ ಸುಮಾರು 9 ಸಾವಿರ ಉದ್ಯೋಗಿಗಳಿದ್ದಾರೆ. ಅದನ್ನು ಈಗ ಶೇ10 ರಿಂದ 15 ರಷ್ಟು ಕಡಿಮೆ ಮಾಡಲು ಚಿಂತನೆ ನಡೆಲಾಗುತ್ತಿದೆ. ಶೇ 15 ಎಂದರೆ 1,350 ಸಿಬ್ಬಂದಿ. ಇದರಿಂದಾಗಿ ಸುಮಾರು ₹100 ಕೋಟಿ ಉಳಿತಾಯವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಉದ್ಯೋಗಿಗಳ ವಜಾದ ಬಗ್ಗೆ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.