ಕೋಲ್ಕತ್ತ: ದೇಶದ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ನಾವೆಲ್ಲರೂ ಒಟ್ಟಾಗಿ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ ವಿರುದ್ಧ ವಿಪಕ್ಷಗಳ ಬಣ ರಚನೆಗೆ ಪ್ರಯತ್ನಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದೇವೇಳೆ, ವಿಶಾಲ ದೃಷ್ಟಿಯಿಂದ ಉತ್ತರ ಪ್ರದೇಶದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.
‘ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ಪಕ್ಷವು ಯಾವುದೇ ಕ್ಷೇತ್ರದಲ್ಲಿ ದುರ್ಬಲವಾಗುವುದು ನನಗೆ ಇಷ್ಟವಿಲ್ಲ. ಹಾಗಾಗಿ, ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 57 ಕ್ಷೇತ್ರಗಳ ಪೈಕಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ’ ಎಂದು ಮಮತಾ ಹೇಳಿದ್ದಾರೆ.
‘ಉತ್ತರ ಪ್ರದೇಶದಲ್ಲಿ ಮಹಿಳೆಯರನ್ನು ಜೀವಂತ ಸುಡಲಾಗುತ್ತಿದ್ದು, ರೈತರ ಕೊಲೆ ಆಗುತ್ತಿದೆ. ಅಲ್ಲಿರುವುದು ಯೋಗಿ ಅಲ್ಲ, ಬೋಗಿ. ಭಾರತವು ಉಳಿಯಬೇಕಾದರೆ ಮೊದಲು ಉತ್ತರ ಪ್ರದೇಶವನ್ನು ಉಳಿಸಬೇಕಿದೆ’ ಎಂದು ಹೇಳಿದ್ದಾರೆ.
ಮಾರ್ಚ್ 3ರಂದು ಮತ್ತೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ವಾರಾಣಸಿಯಲ್ಲಿ ರ್‍ಯಾಲಿ ನಡೆಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಜಾತ್ಯತೀತರೆಂದು ಹೇಳಿಕೊಳ್ಳುವ ಪಕ್ಷಗಳು ಒಂದುಗೂಡುವ ಅಗತ್ಯವಿದೆ. ಕಾಂಗ್ರೆಸ್ ಮತ್ತು ಸಿಪಿಐ(ಎಂ)ಗೆ ನಮ್ಮ ಜೊತೆ ಕೈಜೋಡಿಸಲು ಮನವಿ ಮಾಡಿದ್ದೇನೆ. ಅವರು ನನ್ನ ಮಾತು ಕೇಳದಿದ್ದರೆ ನಾನು ಏನೂ ಮಾಡಲಾಗದು ಎಂದಿದ್ದಾರೆ.
ದ್ವೇಷ ಮತ್ತು ದೌರ್ಜನ್ಯದಿಂದ ದೇಶವನ್ನು ಮುಕ್ತಗಳಿಸುವ ಸಮಯವಿದು ಎಂದು ಮಮತಾ ಒತ್ತಿ ಹೇಳಿದ್ದಾರೆ.
‘ಭಾರತದ ಆಡಳಿತ ವ್ಯವಸ್ಥೆಯು ಅಧ್ಯಕ್ಷೀಯ ಮಾದರಿಯಾಗಿ ಬದಲಾಗುತ್ತಿದೆ. ಸಂವಿಧಾನವನ್ನು ನಾಶಪಡಿಸಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.