ನವದೆಹಲಿ: ಮೂವತ್ತು ಬಾರಿ ಬಸ್ಕಿ ಹೊಡೆದರೆ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಉಚಿತ! ಇಂತಹದೊಂದು ಅವಕಾಶವನ್ನುಭಾರತೀಯ ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಒದಗಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ, ಮೊದಲ ಫಿಟ್ ಇಂಡಿಯಾ ಸ್ಕ್ವಾಟ್ ಯಂತ್ರವನ್ನು ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಈಗಾಗಲೇ ಒಬ್ಬ ವ್ಯಕ್ತಿ 180 ಸೆಕೆಂಡ್‌ನಲ್ಲಿ 30 ಬಾರಿ ಬಸ್ಕಿ ಹೊಡೆದು ಉಚಿತಪ್ಲಾಟ್‌ಫಾರ್ಮ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
‘ಈ ನಿಲ್ದಾಣದಲ್ಲಿ ಗುರುವಾರ ಯಂತ್ರವನ್ನು ಅಳವಡಿಸಿದ್ದು ಇಲ್ಲಿಯವರೆಗೆ 200 ಮಂದಿ ಪ್ರಯತ್ನ ನಡೆಸಿದ್ದಾರೆ. ಕೆಲವರು 180 ಸೆಕೆಂಡ್‌ನಲ್ಲಿ 30 ಬಾರಿ ಬಸ್ಕಿ ಹೊಡೆದ ವ್ಯಕ್ತಿಯನ್ನು ದಾಖಲೆಯನ್ನು ಹಿಂದಿಕ್ಕುವ ಪ್ರಯತ್ನ ಮಾಡಿದ್ದಾರೆ’ ಎಂದು ಭಾರತೀಯ ರೈಲು ನಿಲ್ದಾಣ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಲೋಹಿಯಾ ಅವರು ಮಾಹಿತಿ ನೀಡಿದರು.
‘ಇದು ಸ್ವಯಂ ಚಾಲಿತ ಯಂತ್ರವಾಗಿದ್ದರಿಂದ ಯಾವುದೇ ಬಟನ್ ಒತ್ತುವ ಅಗತ್ಯ ಇಲ್ಲ. ಯಂತ್ರದ ಮುಂದೆ ಬಸ್ಕಿ ಹೊಡೆಯುತ್ತಿದ್ದಂತೆ ಯಂತ್ರವು ಎಣಿಕೆ ಪ್ರಾರಂಭಿಸುತ್ತದೆ. ಸರಿಯಾಗಿ ಬಸ್ಕಿ ಹೊಡೆಯುತ್ತಿದ್ದೇವೋ ಇಲ್ಲವೋ ಎನ್ನುವುದನ್ನೂ ಈ ಯಂತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ನಂತರ ಯಂತ್ರವೇ ಟಿಕೆಟ್ ನೀಡುತ್ತದೆ’ ಎಂದು ವಿವರಿಸಿದರು.
‘ಇಂಥ ಯಂತ್ರಗಳನ್ನು ದೇಶದಾದ್ಯಂತ ಆಯ್ದ ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗುವುದು. ಇದರಿಂದ ಫಿಟ್ ಇಂಡಿಯಾ ಚಳವಳಿಯ ಉದ್ದೇಶ ಈಡೇರಿದಂತಾಗುತ್ತದೆ. ಜತೆಗೆ, ನಿಲ್ದಾಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ’ ಎಂದರು.
‘ಭಾರತದಲ್ಲಿ ಇದು ಮೊದಲ ಪ್ರಯೋಗ. ಆದರೆ, ವಿದೇಶದಲ್ಲಿ ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಇದು ಸಾಮಾನ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.