ಚೆನ್ನೈ: ಶ್ರೀಲಂಕಾ ನೌಕಾಪಡೆಯ ಹಡಗು ಹಾಗೂ ಭಾರತದ ಮೀನುಗಾರಿಕಾ ದೋಣಿ ಪರಸ್ಪರ ಡಿಕ್ಕಿ ಹೊಡೆದಿದ್ದ ಪರಿಣಾಮ ಮೃತಪಟ್ಟಿದ್ದ ಭಾರತದ ಮೀನುಗಾರನ ಮೃತದೇಹವನ್ನು ಶ್ರೀಲಂಕಾ ಹಸ್ತಾಂತರಿಸಿದೆ.
ಕಚ್ಚತೀವು ದ್ವೀಪದಿಂದ ಐದು ನೌಕಾ ಮೈಲು ದೂರದಲ್ಲಿ ಗುರುವಾರ ಶ್ರೀಲಂಕಾ ನೌಕಾಪಡೆಯ ಹಡಗು ಹಾಗೂ ಭಾರತದ ಮೀನುಗಾರಿಕಾ ದೋಣಿಯ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿತ್ತು.
ಅಕ್ರಮವಾಗಿ ಮೀನುಗಾರಿಕೆ ಮಾಡುವವರನ್ನು ಬೆನ್ನಟ್ಟಿ ಹಡಗು ಸಾಗುವಾಗ ಡಿಕ್ಕಿ ಸಂಭವಿಸಿದೆ ಎಂದು ಶ್ರೀಲಂಕಾದ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಗಯನ್ ವಿಕ್ರಮಸೂರ್ಯ ‘ಡೈಲಿ ಮಿರರ್’ಗೆ ತಿಳಿಸಿದ್ದರು.
ಮೃತ ಮೀನುಗಾರನನ್ನು 59 ವರ್ಷದ ಕೆ. ಮಲೈಚಾಮಿ ಎಂದು ಗುರುತಿಸಲಾಗಿದೆ. ಉಳಿದಂತೆ ಆರ್. ಮುತ್ತು ಮುನಿಯಾಂಡಿ (57), ಎಂ. ಮೂಕಯ್ಯ (54) ಅವರನ್ನು ರಕ್ಷಣೆ ಮಾಡಲಾಗಿದೆ. ವಿ. ರಾಮಚಂದ್ರನ್ (64) ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಮಾತುಕತೆ ಬಳಿಕ ಶ್ರೀಲಂಕಾ ನೌಕಾಪಡೆಯು ಮಲೈಚಾಮಿ ಮೃತದೇಹ ಸೇರಿದಂತೆ ಮುತ್ತು, ಮುನಿಯಾಂಡಿ ಹಾಗೂ ಮೂಕಯ್ಯ ಅವರನ್ನು ಇಂದು ಬೆಳಿಗ್ಗೆ ಅಂತರರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ಬಳಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ.
ಘಟನೆ ಕುರಿತು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದೆಹಲಿಯಲ್ಲಿರುವ ಶ್ರೀಲಂಕಾದ ಹೈಕಮಿಷನರ್ ಬಳಿ ಪ್ರತಿಭಟನೆ ದಾಖಲಿಸಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.