ಚೆನ್ನೈ: ಸಮುದ್ರ ಗಡಿ ರೇಖೆ ಉಲ್ಲಂಘನೆ ಆರೋಪದ ಮೇಲೆ ತಮಿಳುನಾಡಿನ 11 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಮೀನುಗಾರಿಕೆಗೆ ಬಳಸಲಾದ ಒಂದು ದೋಣಿಯನ್ನು ವಶಪಡಿಸಿಕೊಂಡಿದೆ.
ಮೀನುಗಾರರ ಬಿಡುಗಡೆಗೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.
ಈ ಸಂಬಂಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ‘ತಮಿಳುನಾಡಿನ ಮೀನುಗಾರರನ್ನು ಬಂಧಿಸಿರುವ ಮತ್ತೊಂದು ಘಟನೆಯ ಕುರಿತು ತೀವ್ರ ಕಳವಳದಿಂದ ನಿಮಗೆ ಪತ್ರ ಬರೆಯುತ್ತಿದ್ದೇನೆ. ನಾಗಪಟ್ಟಣಂ ಜಿಲ್ಲೆಯ ಕೊಡಿಯಾಕಾರೈನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಇಂತಹ ಘಟನೆಗಳು ಪುನರಾವರ್ತಿತವಾಗಿ ಸಂಭವಿಸುತ್ತಿದ್ದು, ಪ್ರಸ್ತಕ ವರ್ಷದಲ್ಲಿಯೇ ಶ್ರೀಲಂಕಾ ನೌಕಪಡೆಯು 324 ಭಾರತೀಯ ಮೀನುಗಾರರು ಮತ್ತು 44 ದೋಣಿಗಳನ್ನು ವಶಕ್ಕೆ ಪಡೆದಿದೆ. ಇದರಿಂದಾಗಿ ಮೀನುಗಾರರು ಅಪಾರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಅವರ ಜೀವನಾಧಾರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ‘ ಎಂದು ಬರೆದಿದ್ದಾರೆ.
ಇದಲ್ಲದೆ, ಕಳೆದ ಎರಡು ವಾರಗಳಲ್ಲಿ ಶ್ರೀಲಂಕಾದ ಅಪರಿಚಿತ ವ್ಯಕ್ತಿಗಳಿಂದ ಮೀನುಗಾರರ ಮೇಲೆ ಹಲ್ಲೆ ನಡೆದಿರುವ ಒಂದೆರಡು ನಿದರ್ಶನಗಳು ನಡೆದಿವೆ. ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕಾಗಿದೆ. ಎಲ್ಲ ಮೀನುಗಾರರು ಮತ್ತು ಮೀನುಗಾರಿಕಾ ದೋಣಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಟಾಲಿನ್ ಮನವಿ ಮಾಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.