ಶ್ರೀನಗರ: ಬಾಂಬ್ ಬೆದರಿಕೆಯಿಂದಾಗಿ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯು ಶುಕ್ರವಾರ ಒಂದು ಗಂಟೆ ಕಾಲ ಸ್ಥಗಿತಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯಿಂದ ಬಂದ ಏರ್ ವಿಸ್ತಾರಾ ವಿಮಾನದಲ್ಲಿ ಬಾಂಬ್ ಇರಿಸಿರುವುದರ ಬಗ್ಗೆ ಶ್ರೀನಗರ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ಎಟಿಸಿ) ಇಂದು ಮಧ್ಯಾಹ್ನ ಬೆದರಿಕೆ ಕರೆ ಬಂದಿತ್ತು. ವಿಮಾನದಲ್ಲಿ 178 ಪ್ರಯಾಣಿಕರು ಇದ್ದರು.
ತಕ್ಷಣವೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವನ್ನು ಕೈಗೊಂಡರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಭದ್ರತೆಯನ್ನು ಬಿಗಿಗೊಳಿಸಿತು.
ವಿಮಾನ ಲ್ಯಾಂಡ್ ಆದ ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಬಳಿಕ ವಿಮಾನವನ್ನು ತಪಾಸಣೆ ನಡೆಸಲಾಯಿತು.
ಬಾಂಬ್ ನಿಷ್ಕ್ರೀಯ ದಳ, ಶ್ವಾನದಳದಿಂದ ಸಂಪೂರ್ಣ ಶೋಧ ನಡೆಸಲಾಯಿತು. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಒಂದು ತಾಸು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬಳಿಕ ವಿಮಾನಗಳ ಹಾರಾಟ ಯಥಾಸ್ಥಿತಿಗೆ ಮರಳಿತು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.